ಕೋಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ನಿವಾಸದಿಂದ ಬುಧವಾರ ₹ 20 ಕೋಟಿಗೂ ಹೆಚ್ಚು ನಗದು ಮತ್ತು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯದ(ಇ.ಡಿ) ಮೂಲಗಳು ತಿಳಿಸಿವೆ.
ತಡರಾತ್ರಿವರೆಗೂ ಹಣ ಎಣಿಕೆ ಪ್ರಕ್ರಿಯೆ ಇನ್ನೂ ಮುಂದುವರೆದಿತ್ತು ಎಂದು ಇಡಿ ಮೂಲಗಳು ತಿಳಿಸಿವೆ.
'ಬೆಲ್‌ಘಾರಿಯಾದಲ್ಲಿರುವ ಅವರ ನಿವಾಸದಿಂದ ಹಣ ಜಪ್ತಿ ಮಾಡಲಾಗಿದ್ದು, ಹಣದ ಎಣಿಕೆ ಇನ್ನೂ ಮುಂದುವರೆದಿದೆ. ಮೊತ್ತವು ಸುಮಾರು ₹ 21.20 ಕೋಟಿ ಇರಬಹುದು. ಇದೇ ಸಮಯದಲ್ಲಿ ಚಿನ್ನದ ಗಟ್ಟಿ ಮತ್ತು ಕೆಲವು ಆಭರಣಗಳು ಸೇರಿ 3 ಕೆ.ಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ'ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಸಂಜೆ, ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಬೆಂಗಾವಲಿನಲ್ಲಿ ಇಡಿ ಅಧಿಕಾರಿಗಳು ಮುಖರ್ಜಿ ಅವರ ನಿವಾಸದ ಬೀಗವನ್ನು ಮುರಿದರು. ನಿವಾಸದ ಬೆಡ್‌ರೂಮ್‌ನ ಬೀಗವನ್ನು ತೆರೆದಾಗ ನೋಟಿನ ಬಂಡಲ್‌ಗಳು ಕಂಡು ಬಂದವು ಎಂದು ಅವರು ತಿಳಿಸಿದ್ದಾರೆ.
ಬಳಿಕ, ನೋಟುಗಳನ್ನು ಎಣಿಸಲು ಸಹಾಯಕ್ಕಾಗಿ ಇಡಿ ಅಧಿಕಾರಿಗಳು ಕೋಲ್ಕತ್ತಾದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿದರು. ಅರ್ಧ ಗಂಟೆಯೊಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳು ನಾಲ್ಕು ಹಣ ಎಣಿಕೆ ಯಂತ್ರಗಳೊಂದಿಗೆ ಬಂದರು.
ಜುಲೈ 23ರಂದು ಅರ್ಪಿತಾ ಅವರ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು 21 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದರು.