ನವದೆಹಲಿ: ಅತಿ ದೊಡ್ಡ ಕೊರೊನಾ ತಡೆ ಅಭಿಯಾನದಲ್ಲಿ ಭಾರತ ಹೊಸ ಮೈಲಿಗಲ್ಲನ್ನು ದಾಟಿದೆ. ಜಗತ್ತು ಕಂಡ ಅತ್ಯಂತ ಭೀಕರ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪ್ರಾರಂಭಿಸಿದ ಕೊರೋನಾ ಲಸಿಕೆ ದೇಶದಲ್ಲಿ 200 ಕೋಟಿ ದಾಟಿದೆ. 16ನೇ ಜನವರಿ 2021 ರಿಂದ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದ ನಂತರ ಭಾರತದಲ್ಲಿ 200 ಕೋಟಿ ಲಸಿಕೆ ಡೋಸ್‍ಗಳ ವಿತರಣೆ ಪೂರ್ಣಗೊಂಡಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಮಾತನಾಡಿ, ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಈ ಸಾಧನೆ ಮಾಡಲು ಅವಿರತವಾಗಿ ಶ್ರಮಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕರನ್ನು ಶ್ಲಾಘಿಸುತ್ತೇವೆ ಎಂದಿರುವರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು. ನಂತರ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆಯನ್ನು ಫೆಬ್ರವರಿ 2, 2021 ರಂದು ಪ್ರಾರಂಭಿಸಲಾಯಿತು. ಹಿರಿಯ ನಾಗರಿಕರಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ತೀವ್ರ ಅಸ್ವಸ್ಥರಿಗೆ ಮುಂದಿನ ಹಂತದ ಲಸಿಕೆಯನ್ನು ಏಪ್ರಿಲ್ 1 ರಂದು ಪ್ರಾರಂಭಿಸಲಾಯಿತು.
ಮೇ 1, 2021 ರಿಂದ ಎಲ್ಲಾ ವಯಸ್ಕರಿಗೆ ಕೊರೋನ ವೈರಸ್ ವಿರುದ್ಧ ಲಸಿಕೆ ಹಾಕುವ ಮೂಲಕ ಅಭಿಯಾನದ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರವು ನಿರ್ಧರಿಸಿತು. ಮಾರ್ಚ್ 16, 2022 ರಿಂದ, ದೇಶವು 12-14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿತು. ಏಪ್ರಿಲ್ 10 ರಂದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲಾಯಿತು.
ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಜುಲೈ 15 ರಿಂದ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ತಡೆಗಟ್ಟುವ ಲಸಿಕೆ ಡೋಸ್ಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ. ಬಳಿಕ ಜುಲೈ 15 ರಿಂದ 75 ದಿನಗಳ ವಿಶೇಷ ಲಸಿಕೆ ಅಭಿಯಾನ ಪ್ರಾರಂಭವಾಗಿದೆ.