ನವದೆಹಲಿ :ಜುಲೈ ಮತ್ತು ಡಿಸೆಂಬರ್ 2021ರ ನಡುವೆ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ದೃಢೀಕೃತ ಹ್ಯಾಂಡಲ್‍ಗಳಿಂದ ಟ್ವೀಟ್‍ಗಳನ್ನು ತೆಗೆದುಹಾಕಲು ಗರಿಷ್ಠ ಬೇಡಿಕೆಗಳನ್ನು ಭಾರತ ಸಲ್ಲಿಸಿತ್ತು ಎಂದು ತನ್ನ 20ನೇ ಟ್ರಾನ್‍ಸ್ಪರೆನ್ಸಿ ವರದಿಯಲ್ಲಿ ಟ್ವಿಟ್ಟರ್ ಹೇಳಿದೆ.
ಜಗತ್ತಿನಾದ್ಯಂತ ಈ ಅವಧಿಯಲ್ಲಿ ಪತ್ರಕರ್ತರು ಮತ್ತು ಸುದ್ದಿ ತಾಣಗಳ ವಿಷಯಗಳನ್ನು ತೆಗೆದುಹಾಕಲು 326 ಮನವಿಗಳು ಬಂದಿದ್ದವು, ಇದಕ್ಕೆ ಹಿಂದಿನ ಅವಧಿಗೆ ಹೋಲಿಸಿದಾಗ ಈ ನಿಟ್ಟಿನಲ್ಲಿ ಶೇ 103ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಭಾರತದಿಂದ 114 ಅರ್ಜಿಗಳು ಬಂದಿದ್ದರೆ ಟರ್ಕಿಯಿಂದ 87, ರಷ್ಯಾದಿಂದ 55, ಪಾಕಿಸ್ತಾನದಿಂದ 48 ಅರ್ಜಿಗಳು ಬಂದಿದ್ದವು. ಉಳಿದ ಅರ್ಜಿಗÀಳು ಬ್ರೆಜಿಲ್ ಮತ್ತು ಕತಾರ್ ಸೇರಿದಂತೆ 12 ದೇಶಗಳಿಂದ ಬಂದಿದ್ದವು.
ಪತ್ರಕರ್ತರ ಮತ್ತು ಸುದ್ದಿ ತಾಣಗಳ ದೃಢೀಕೃತ ಹ್ಯಾಂಡಲ್‍ಗಳಂದ ಬಂದ 17 ಟ್ವೀಟ್‍ಗಳನ್ನು ತಡೆಹಿಡಿಯಲಾಗಿದೆ, ಕಳೆದ ಬಾರಿ 11 ಟ್ವೀಟ್‍ಗಳನ್ನು ತಡೆಹಿಡಿಯಲಾಗಿತ್ತು ಎಂದು ವರದಿ ತಿಳಿಸಿದೆ.
ಟ್ವಿಟ್ಟರ್‍ನ ಜನವರಿ-ಜೂನ್ 2021 ಟ್ರಾನ್‍ಸ್ಪರೆನ್ಸಿ ವರದಿಯಲ್ಲೂ ಭಾರತ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದ್ದು ಆ ಅವಧಿಯಲ್ಲಿ ಬಂದ ಒಟ್ಟು 231 ಅರ್ಜಿಗಳ ಪೈಕಿ 89 ಭಾರತದಿಂದ ಬಂದಿತ್ತು.
ಟ್ವಿಟ್ಟರ್‍ನ ಲೇಟೆಸ್ಟ್ ವರದಿಯ ಪ್ರಕಾರ ಟ್ವಿಟ್ಟರ್‍ನಿಂದ ಕಂಟೆಂಟ್ ತೆಗೆದುಹಾಕಲು ಭಾರತದಿಂದ ಒಟ್ಟು 3,992 ಕಾನೂನಾತ್ಮಕ ಬೇಡಿಕೆಗಳು ಬಂದಿದ್ದವು. ಈ ನಿಟ್ಟಿನಲ್ಲಿ ಗರಿಷ್ಠ ಬೇಡಿಕೆ ಸಲ್ಲಿಸಿದ ಐದು ದೇಶಗಳ ಪೈಕಿ ಭಾರತ ಒಂದಾಗಿದೆ ಎಂದು ವರದಿ ಹೇಳಿದೆ.
ಒಟ್ಟು ಬೇಡಿಕೆಗಳ ಪೈಕಿ ಶೇ 97ರಷ್ಟು ಜಪಾನ್, ರಷ್ಯಾ, ದಕ್ಷಿಣ ಕೊರಿಯಾ, ಟರ್ಕಿ ಮತ್ತು ಭಾರತದಿಂದ ಬಂದಿದ್ದವು.
ಅಪ್ರಾಪ್ತೆಯೊಬ್ಬರ ಖಾಸಗಿತನ ವಿಚಾರಕ್ಕೆ ಸಂಬಂಧಿಸಿದ ವಿಷಯವೊಂದನ್ನು ತೆಗೆದುಹಾಕಲು ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಮನವಿ ಬಂದಿತ್ತು. ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರ ಟ್ವೀಟ್ ಆಗಿತ್ತು ಎಂದು ಟ್ವಿಟ್ಟರ್ ಹೇಳಿದೆ.
ಇಲ್ಲಿ ಹೆಸರು ಉಲ್ಲೇಖಿಸದೇ ಇದ್ದರೂ ಆ ವ್ಯಕ್ತಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎಂಬುದು ಸ್ಪಷ್ಟ. ಅತ್ಯಾಚಾರ ಮತ್ತು ಕೊಲೆಗೀಡಾದ ದಲಿತ ಬಾಲಕಿಯೊಬ್ಬಳ ಗುರುತನ್ನು ಬಹಿರಂಗಪಡಿಸುವ ಫೋಟೋ ಒಂದನ್ನು ರಾಹುಲ್ ಹಾಕಿದ್ದರು, ಅದನ್ನು ತೆಗೆದುಹಾಕುವಂತೆ ಆಯೋಗ ಆಗಸ್ಟ್ ನಲ್ಲಿ ಟ್ವಿಟ್ಟರ್‍ಗೆ ಕೋರಿತ್ತು.
ಟ್ವಿಟ್ಟರ್ ಬಳಕೆದಾರರ ಖಾತೆ ಮಾಹಿತಿಯನ್ನು ಕೇಳುವ ಮನವಿ ಸಲ್ಲಿಸಿದ ರಾಷ್ಟ್ರಗಳ ಪೈಕಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಒಟ್ಟು ಅರ್ಜಿಗಳ ಪೈಕಿ ಶೇ 20ರಷ್ಟು ಅಮೆರಿಕಾದಿಂದ ಹಾಘೂ ಶೇ 19 ಭಾರತದಿಂದ ಬಂದಿದ್ದವು. ಜಪಾನ್ ಮತ್ತು ಫ್ರಾನ್ಸ್ ದೇಶಗಳಿಂದ ಬಂದ ಅರ್ಜಿಗಳ ಪ್ರಮಾಣ ಶೇ 17ರಷ್ಟಾಗಿತ್ತು ಎಂದು ವರದಿ ಹೇಳಿದೆ.