ನವದೆಹಲಿ :ಆರ್ಥಿಕ ವರ್ಷ 2021-22ರಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆಯನ್ನು 78 ಬಾರಿ ಏರಿಸಲಾಗಿದ್ದರೆ ಡೀಸೆಲ್ ಬೆಲೆಗಳನ್ನು 76 ಬಾರಿ ಏರಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ರಾಮೇಶ್ವರ್ ತೇಲಿ ಇಂದು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಆಪ್ ಸಂಸದ ರಾಘವ್ ಛಡ್ಡ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಸಚಿವರು ಈ ಮಾಹಿತಿ ನೀಡಿದ್ದಾರೆ.
ಆರ್ಥಿಕ ವರ್ಷ 2021-22ರಲ್ಲಿ ಪೆಟ್ರೋಲ್ ಬೆಲೆಯನ್ನು ಏಳು ಬಾರಿ ಕಡಿಮೆಗೊಳಿಸಲಾಗಿದ್ದರೆ ಡೀಸೆಲ್ ಬೆಲೆಗಳನ್ನು 10 ಬಾರಿ ಕಡಿಮೆಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಎಪ್ರಿಲ್ 1, 2021 ರಿಂದ ಈ ವರ್ಷದ ಜುಲೈ 18ರ ತನಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಶೇ 6.8ರಷ್ಟು ಹಾಗೂ ಡೀಸೆಲ್ ಬೆಲೆ ಶೇ 10.8ರಷ್ಟು ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯಾನ್ ಅವರು ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ದಿಲ್ಲಿಯಲ್ಲಿ ಎಪ್ರಿಲ್ 1, 2019 ರಿಂದ ಈ ವರ್ಷದ ಜುಲೈ 6ರ ನಡುವೆ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ ರೂ 706.50 ರಿಂದ ರೂ 1,053 ಗೆ ಏರಿಕೆಯಾಗಿದೆ.
ಆರ್ಥಿಕ ವರ್ಷ 2019-20ರಲ್ಲಿ ಕೇಂದ್ರ ಸರಕಾರ ರೂ 24,172 ಕೋಟಿ ಎಲ್‍ಪಿಜಿ ಸಬ್ಸಿಡಿ ಒದಗಿಸಿದ್ದರೆ, 2020-21ರಲ್ಲಿ ರೂ 11,896 ಕೋಟಿ ಸಬ್ಸಿಡಿ ಒದಗಿಸಿದೆ. 2021-22ರಲ್ಲಿ ಈ ಮೊತ್ತ ರೂ 242 ಕೋಟಿ ಆಗಿದೆ.