ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ), ಸೈಬರ್ ಭದ್ರತೆ ಮತ್ತು ಬಾಲ್ಯಾವಸ್ಥೆಯ ಆರೈಕೆ ಸೇರಿ 23 ಸಾವಿರ ಉನ್ನತ ಶಿಕ್ಷಣ ಕೋರ್ಸ್‌ಗಳು ಇಂಗ್ಲಿಷ್ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಈಗ ಹೊಸ ವೆಬ್ ಪೋರ್ಟಲ್‌ನಲ್ಲಿ ಉಚಿತವಾಗಿ ಲಭಿಸಲಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.
ದೇಶದ ಮೂಲೆಮೂಲೆಗೂ ಎಲ್ಲರಿಗೂ ಉನ್ನತ ಶಿಕ್ಷಣವನ್ನು ಡಿಜಿಟಲ್ ಸಂಪನ್ಮೂಲದ ಮೂಲಕ ಒದಗಿಸುವ ಗುರಿ ಹೊಂದಿರುವ ಜಾಲತಾಣವನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಎರಡನೇ ವಾರ್ಷಿಕೋತ್ಸವದ ಭಾಗವಾಗಿ ಶುಕ್ರವಾರ ಪ್ರಾರಂಭಿಸಲಾಗುವುದು. ಉನ್ನತ ಶಿಕ್ಷಣದ ಉಚಿತ ಕೋರ್ಸ್‌ಗಳನ್ನು ಮುಂಬರುವ 2022-23ರ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ತಿಳಿಸಿದ್ದಾರೆ.