ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ(ಜೆಇಇ), ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 21 ರ ಬದಲಿಗೆ ಜುಲೈ 25ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.
"ಜುಲೈ 25 ರಿಂದ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಪ್ರಾರಂಭವಾಗಲಿದ್ದು, ಭಾರತದ ಹೊರಗಿನ 17 ನಗರಗಳು ಸೇರಿದಂತೆ ಸುಮಾರು 500 ನಗರಗಳ ವಿವಿಧ ಕೇಂದ್ರಗಳಲ್ಲಿ 6.29 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ " ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 21 ರಿಂದ ಜುಲೈ 30 ರವರೆಗೆ ನಿಗದಿಪಡಿಸಲಾಗಿದ್ದ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಷನ್ ಜುಲೈ 25ಕ್ಕೆ ಮುಂದೂಡಲಾಗಿದೆ. ಆದರೆ ಮುಂದೂಡಿಕೆ ಹಿಂದಿನ ಕಾರಣವನ್ನು ಎನ್‌ಟಿಎ ಉಲ್ಲೇಖಿಸಿಲ್ಲ.
jeemain.nta.nic.in ಭೇಟಿ ನೀಡಿ, ಗುರುವಾರದಿಂದ ಪರೀಕ್ಷಾ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಎನ್‌ಟಿಎ ತಿಳಿಸಿದೆ.