ಕೊಚ್ಚಿ: ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ' ಎಂಬ ಗಾದೆ ಮಾತಿದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ! ಹಾಗಾದರೆ, ಆ ವಸ್ತು ಏನಂತೀರಾ..? ಅದೇ ತಿಮಿಂಗಿಲದ ವಾಂತಿ!
ಕೇರಳದ ವಿಝಿಂಜಮ್ ಮೂಲದ ಮೀನುಗಾರರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಅಥವಾ ಅಂಬರ್ಗ್ರೀಸ್ ದೊರೆತಿದ್ದು, ಅದನ್ನು ಅಧಿಕಾರಿಗಳಿ ಹಸ್ತಾಂತರ ಮಾಡಿದ್ದಾರೆ.
ಮೀನುಗಾರರಿಗೆ ಸಮುದ್ರದಲ್ಲಿ ಪತ್ತೆಯಾದ ಅಂಬರ್ಗ್ರೀಸ್ 28.400 ಕೆಜಿ ತೂಕವಿದ್ದು, ಇವರ ಮೌಲ್ಯ ಬರೋಬ್ಬರಿ 28 ಕೋಟಿ ರೂಪಾಯಿ ಆಗಿದೆ. ಶುಕ್ರವಾರ ಸಂಜೆ ವಿಝಿಂಜಮ್ನ ಕಡಲ ತೀರದಲ್ಲಿ ಅಂಬರ್ಗ್ರೀಸ್ ಪತ್ತೆಯಾಗಿದ್ದು, ಅದನ್ನು ಕರಾವಳಿ ಪೊಲೀಸರಿಗೆ ಮೀನುಗಾರರು ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕರಾವಳಿ ಪೊಲೀಸರು, ಮೀನುಗಾರರಿಂದ ಅಂಬರ್ಗ್ರೀಸ್ ಅನ್ನು ಪಡೆದುಕೊಂಡಿದ್ದೇವೆ. ಇದಾದ ಬಳಿಕ ಅದರ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಲಾಯಿತು. ಅರಣ್ಯಾಧಿಕಾರಿಗಳು ನಮ್ಮ ಬಳಿ ಬಂದು ಅಂಬರ್ಗ್ರೀಸ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಅಂಬರ್ಗ್ರೀಸ್ ಅನ್ನು ಕೇರಳದ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ. ಅಂಬರ್ಗ್ರೀಸ್ ಮಾರಾಟವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ವೀರ್ಯ ತಿಮಿಂಗಿಲವು ಅಳಿವಿನಂಚಿನಲ್ಲಿರುವ ಜಾತಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ರಕ್ಷಿಸಲಾಗಿದೆ. ಹೀಗಿದ್ದರೂ ಸಾಕಷ್ಟು ಮಂದಿ ಅಕ್ರಮ ಸಾಗಾಣಿಕೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳಿವೆ.
ಇದೀಗ ತಮಗೆ ದೊರೆತಂತಹ ಅಂಬರ್ಗ್ರೀಸ್ ಅನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ ಮೀನುಗಾರರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿವೆ.
ಏನಿದು ಅಂಬರ್ಗ್ರೀಸ್?ಅಂದಹಾಗೆ 'ಸಮುದ್ರದ ನಿಧಿ' ಅಥವಾ 'ತೇಲುವ ಚಿನ್ನ' ಎಂದು ಕರೆಯಲ್ಪಡುವ ಅಂಬರ್ಗ್ರೀಸ್ ಒಂದು ಘನ ಮೇಣದ ಸುಡುವ ವಸ್ತುವಾಗಿದೆ. ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳಲ್ಲಿ ಇದು ಕಂಡುಬರುತ್ತವೆ. ಅವು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿಂದು ಬದುಕುತ್ತವೆ. ಅವು ತಿನ್ನುವ ಮೀನುಗಳಿಗೆ ಅತಿ ಗಟ್ಟಿಯಾದ ಮೂಳೆಗಳಿರುತ್ತವೆ. ಅವುಗಳನ್ನು ಕರಗಿಸಲು ಕಷ್ಟವಾದ್ದರಿಂದ ತಿಮಿಂಗಿಲ ಅದನ್ನು ಜಗಿದು, ಜಗಿದು ಉಗಿಯುತ್ತದೆ. ಉಗಿದ ತಕ್ಷಣ ವಾಂತಿಯು ವಿಪರೀತ ವಾಸನೆ ಬರುತ್ತದೆ. ಕೆಲ ದಿನಗಳ ನಂತರ ಅದು ಘಟ್ಟಿಯಾಗಿ ಸುವಾಸನೆ ಬೀರಲಾರಂಭಿಸುತ್ತದೆ. ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಂಬರ್ ಗ್ರೀಸ್ ಬಳಸಲಾಗುತ್ತದೆ. ಒಂದು ಕೆ.ಜಿ. ಅಂಬರ್ಗ್ರೀಸ್ಗೆ ಸುಮಾರು 1 ಕೋಟಿ ರೂಪಾಯಿ ಬೆಲೆ ಇದೆ.