ಅಹಮದಾಬಾದ್: ಗುಜರಾತ್‌ನ ಬೋಟಾದ್ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಮಹಿಳೆ ಸೇರಿ ಬೋಟಾದ್‌ನ ಹಲವರು ನೀರಿನೊಂದಿಗೆ ವಿಷಕಾರಿ ಮಿಥೆನಾಲ್ ಮಿಶ್ರಣ ಮಾಡಿ ಕಳ್ಳಬಟ್ಟಿ ತಯಾರಿಸುತ್ತಿದ್ದರು.
ಇದನ್ನು ಒಂದು ಪೌಚ್‌ಗೆ ₹20 ರಂತೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರ ರಕ್ತ ಮಾದರಿಯು ಅವರು ಕಳ್ಳಬಟ್ಟಿ ಸೇವಿಸಿರುವುದನ್ನು ಖಚಿತಪಡಿಸಿದೆ. ಪ್ರಕರಣ ಸಂಬಂಧ 14 ಪ್ರಮುಖ ಆರೋಪಿಗಳ ವಿರುದ್ಧ ಮೂರು ಎಫ್‌ಐಆರ್ ದಾಖಲಾಗಿದೆ. ಈ ಪೈಕಿ ಅನೇಕರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಆಶಿಶ್ ಭಾಟಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೊಲೀಸ್ ತನಿಖೆ ಪ್ರಕಾರ, ಜಯೇಶ್ ಅಕಾ ರಾಜು ಎಂಬವರು ತಾವು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಹಮದಾಬಾದ್‌ನ ಗೋದಾಮಿನಿಂದ 600 ಲೀಟರ್ ಮಿಥೆನಾಲ್ ಕದ್ದು, ಅದನ್ನು ಬೋಟಾದ್ ಮೂಲದ ಸಂಬಂಧಿ ಸಂಜಯ್ ಎಂಬವರಿಗೆ ₹40,000ಕ್ಕೆ ಮಾರಾಟ ಮಾಡಿದ್ದರು. ಸಂಜಯ್ ಇದನ್ನು ಬೋಟಾದ್ ಹಲವು ಕಳ್ಳಬಟ್ಟಿ ತಯಾರಿಕರಿಗೆ ಮಾರಾಟ ಮಾಡಿದ್ದರು. ಇವರು ಕಳ್ಳಬಟ್ಟಿ ತಯಾರಿಸಿ ಗ್ರಾಮಸ್ಥರಿಗೆ ಮಾರಾಟ ಮಾಡಿದ್ದಾರೆ. ಇದು 28 ಜನರ ಸಾವಿಗೆ ಕಾರಣವಾಗಿದೆ ಎಂದು ಬಾಟಿಯಾ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆಗೆ ಗುಜರಾತ್ ಗೃಹ ಇಲಾಖೆ, ಹಿರಿಯ ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಅಲ್ಲದೆ ಮೂರು ದಿನದ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.