ಕಾಸರಗೋಡು: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ತ್ರಿಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಕರ್ಕಾಟಕ ಹಬ್ಬದ ಪಿತೃರ್ಪಣ ಕಾರ್ಯಕ್ರಮ ಜು. 28ರಂದು ನಡೆಯಲಿದ್ದು, ದೇವಸ್ಥಾನದ ಆಡಳಿತ ಸಮಿತಿಯು ಈ ಬಗ್ಗೆ ಎಲ್ಲರೀತಿಯ ಸಿದ್ಧತೆ ನಡೆಸಿಕೊಂಡಿರುವುದಾಗಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಬಾಬುರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಉಷ:ಪೂಜೆಯ ನಂತರ ಬಲಿತರ್ಪಣ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾಸರಗೋಡು-ಚಂದ್ರಗಿರಿ ಸೇತುವೆ ಮೂಲಕ ಕಾಞಂಗಾಡಿಗೆ ತೆರಳುವ ಕೆಎಸ್‍ಟಿಪಿ ಹೆದ್ದಾರಿಯ ಬೇಕಲ ಸನಿಹದ ತ್ರಿಕ್ಕನ್ನಾಡು ಕ್ಷೇತ್ರದ ಎದುರಿನ ಸಮುದ್ರ ದಡದಲ್ಲಿ ಬಲಿತರ್ಪಣ ಕಾರ್ಯ ನಡೆಯಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇವಸ್ಥಾನದ ಮುಖ್ಯ ಅರ್ಚಕ ನವಿನ್‍ಚಂದ್ರ ಕಾಯರ್ತಾಯ ಮತ್ತು ಪುರೋಹಿತ ರಾಜೇಂದ್ರ ಅರಳಿತ್ತಾಯ ಅವರ ನೇತೃತ್ವದಲ್ಲಿ ಏಕಕಾಲಕ್ಕೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ವೈದಿಕರು ಬಲಿತರ್ಪಣ ಕಾರ್ಯ ನಡೆಸಿಕೊಡುವರು. ಭಕ್ತಾದಿಗಳ ದಟ್ಟಣೆ, ನೂಕುನುಗ್ಗಲು ಕಡಿಮೆ ಮಾಡುವ ನಿಟ್ಟಿನಲ್ಲಿ ನೈವೇದ್ಯಕ್ಕೆ ಮುಂಗಡ ರಸೀದಿ ನೀಡಲು ಕ್ರಮಕೈಗೊಳ್ಳಲಾಗಿದ್ದುಮ ಇದಕ್ಕಾಗಿ ವಿವಿಧ ಕೌಂಟರ್‍ಗಳು ಕಾರ್ಯಾಚರಿಸಲಿದೆ. ಭಕ್ತಾದಿಗಳಿಗೆ ಕುಡಿಯುವ ನೀರು, ಉಪಾಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಆರೋಗ್ಯ, ಸ್ಕೌಟ್ ಮತ್ತು ಗೈಡ್, ಪೆÇಲೀಸ್, ಕೋಸ್ಟ್ ಗಾರ್ಡ್, ರೋವರ್ ಮತ್ತು ರೇಂಜರ್ ಸೇವೆಗಳು ಬಲಿತರ್ಪಣಾ ಕಾರ್ಯದಲ್ಲಿ ಸಹಕರಿಡಲಿದೆ. ಪ್ರಸಕ್ತ ಇರುವ ಬಸ್ ಸೇವೆಯ ಹೊರತಾಗಿ ಕಾಸರಗೋಡು-ಚಂದ್ರಗಿರಿ ಸೇತುವೆ ಮೂಲಕ ಈ ಹಾದಿಯಾಗಿಕಞಂಗಾಡಿಗೆ ಕೆಎಸ್‍ಆರ್‍ಟಿಸಿ ಹೆಚ್ಚಿನ ಬಸ್ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಲ್ಲಿಯೋಥನ್ ಬಾಲಕೃಷ್ಣನ್ ನಾಯರ್, ಟ್ರಸ್ಟಿಗಳಾದ ಮೆಲೆಟ್ ಸತ್ಯನಾಥನ್ ನಂಬಿಯಾರ್, ಇಡಿಲ್ಲಯಂ ಶ್ರೀವತ್ಸನ್ ನಂಬಿಯಾರ್, ಅಜಿತ್ ಸಿ ಕಳನಾಡ್, ಸುಧಾಕರನ್ ಕೂರ್ಮಲ್ ಉಪಸ್ಥಿತರಿದ್ದರು.