ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನು ಹತ್ತಿದ ಭಾರತ ತಂಡ ಮತ್ತೊಂದು ಸಾಧನೆ ಮಾಡಿದ್ದು, ವಿಂಡೀಸ್ ನೆಲದಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಹೌದು.. ನಿನ್ನೆ ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು. ವಿಂಡೀಸ್ ತಂಡ ನೀಡಿದ 312 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 49.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 312 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು
ಈ ಗೆಲುವಿನ ಮೂಲಕ ಭಾರತ ತಂಡ ವಿಂಡೀಸ್ ನೆಲದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ್ದು, ವೆಸ್ಟ್ ಇಂಡೀಸ್ ನಲ್ಲಿ 300ಕ್ಕೂ ಅಧಿಕ ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ಸಾಧಿಸಿದ ಕೆಲವೇ ತಂಡಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಹಿಂದೆ 2003ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಇದೇ ವಿಂಡೀಸ್ ವಿರುದ್ಧ ಶ್ರೀಲಂಕಾ ತಂಡ 313 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು, ಕ್ರಿಕೆಟ್ ಇತಿಹಾಸದಲ್ಲಿ ವಿಂಡೀಸ್ ನೆಲದಲ್ಲಿ ದಾಖಲಾದ ಮೊದಲ 300ಕ್ಕೂ ಅಧಿಕ ರನ್ ಚೇಸ್ ಪಂದ್ಯ ಇದಾಗಿತ್ತು. ಬಳಿಕ ಈ ದಾಖಲೆ ಮುರಿಯಲು ಬರೊಬ್ಬರಿ 14ವರ್ಷಗಳೇ ಬೇಕಾಯಿತು. 2017ರಲ್ಲಿ ಪ್ರಾವಿಡೆನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ ತಂಡ 309ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.
ಇದಾದ ಎರಡೇ ವರ್ಷಗಳ ಅಂತರದಲ್ಲಿ ಈ ದಾಖಲೆಯನ್ನು ಇಂಗ್ಲೆಂಡ್ ಮುರಿದಿತ್ತು. 2019ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 361 ರನ್ ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ಮೆಟ್ಟಿ ನಿಂತಿತ್ತು. ಇದು ವಿಂಡೀಸ್ ನೆಲದಲ್ಲಿ ದಾಖಲಾಗಿರುವ ಇದುವರೆಗಿನ ಗರಿಷ್ಠ ಯಶಸ್ವಿ ರನ್ ಚೇಸ್ ಆಗಿದೆ. ಇದಾದ ಬಳಿಕ ನಿನ್ನೆ ಪೋರ್ಟ್ ಆಫ್ ಸ್ಪೇನ್ ನಲ್ಲಿ ಭಾರತ ಇದೇ ವಿಂಡೀಸ್ ವಿರುದ್ಧ 311 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಈ ದಾಖಲೆ ಮಾಡಿದ ರಾಷ್ಚ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.
Highest targets successfully chased in ODIs in West Indies
361 Eng vs WI Bridgetown 2019
313 SL vs WI Bridgetown 2003
311 Ind vs WI Port of Spain 2022*
309 WI vs Pak Providence 2017