ಹೈದರಾಬಾದ್: ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮುಂಜಾಗ್ರತಾ ಕ್ರಮವಾಗಿ ಜುಲೈ 11ರಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ರಾಜ್ಯದ ಅಸಿಫಾಬಾದ್, ನಿರ್ಮಲ್, ನಿಜಾಮಾಬಾದ್, ಸಿರಿಸಿಲ್ಲಾ, ಭೂಪಾಲ್‌ಪಲ್ಲಿ ಮತ್ತು ಮುಲುಗು, ಆದಿಲ್ ಬಾದ್, ಕೊಮರಂ ಭೀಮ್ ಆಸಿಫಾಬಾದ್, ಮಂಚೇರಿಯಲ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲ್‌ಪಲ್ಲಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮುಂದಿನ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ಬೆನ್ನಲ್ಲೇ ಮುಖ್ಯಮಂತ್ರಿ ರಾವ್, ಸಚಿವರು, ಮುಖ್ಯಕಾರ್ಯದರ್ಶಿ ಸೋಮೇಶ್ ಕುಮಾರ್ ಅವರೊಂದಿಗೆ ಈವರೆಗೆ ಕೈಗೊಂಡ ಮುಂಜಾಗ್ರತಾ ಕ್ರಮ ಮತ್ತು ಪ್ರಸ್ತುತ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು.
ಶನಿವಾರ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಪರಿಸ್ಥಿತಿಯ ವರದಿ ಪಡೆದಿದ್ದರು. ಈ ವೇಳೆ ಎಲ್ಲಾ ಇಲಾಖೆಗಳ ನೆರವು ಪಡೆದು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದ್ದರು. ಅಗತ್ಯವಿದ್ದಲ್ಲಿ ಪ್ರವಾಹ ಪೀಡಿತ ಸ್ಳಳಗಳಿಂದ ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದರು.
ಮಹಾರಾಷ್ಟ್ರದಲ್ಲಿ ಈ ವರ್ಷ ಮಳೆಯಿಂದ 76 ಸಾವು
ಮುಂಬೈ: ಮಹಾರಾಷ್ಟ್ರದಲ್ಲಿ ಈ ವರ್ಷ ಮಾನ್ಸೂನ್‌ನಲ್ಲಿ ಮಳೆ ಸಂಬಂಧಿತ ಅನಾಹುತಗಳಿಂದ 76 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮಳೆಯಿಂದಾಗಿ ಜೂನ್ 1ರಿಂದ 125 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕರಾವಳಿ ಕೊಂಕಣ ಪ್ರದೇಶದಲ್ಲಿ ಜುಲೈ 13ರ ವರೆಗೆ ಭಾರೀ ಮಳೆಯಾಗಲಿದ್ದು, 64 ಮಿ.ಮೀ ನಿಂದ 200 ಮಿ.ಮೀ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.