ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧನ ಹೊಂದಿದವರಿಗೆ 30 ವರ್ಷಗಳ ನಂತರ ಮದುವೆ ಶಾಸ್ತ್ರ ನೆರವೇರಿಸಲಾಗಿದೆ.
ಮೃತಪಟ್ಟು 30 ವರ್ಷಗಳ ನಂತರ ಆತ್ಮಗಳ ಮದುವೆ. ಹೌದು, ರಾಜ್ಯದ ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಶಿಷ್ಟ ಸಂಪ್ರದಾಯ ಚಾಲ್ತಿಯಲಿದೆ.
ಶೋಭಾ ಮತ್ತು ಚಂದಪ್ಪ ಎಂಬುವರು 30 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹುಟ್ಟಿದ ಕೂಡಲೇ ಮೃತಪಟ್ಟಿದ್ದ ಈ ಇಬ್ಬರ ಆತ್ಮಗಳಿಗೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲಾಗಿದೆ. ಈ ಆಚರಣೆಯನ್ನು 'ಪ್ರೇತ ಕಲ್ಯಾಣ', 'ಪ್ರೇತಗಳ ಮದುವೆ' ಅಥವಾ 'ಸತ್ತವರ ಮದುವೆ' ಎಂದು ಕರೆಯುತ್ತಾರೆ.
ಆತ್ಮಗಳ ಮದುವೆ ವಿಡಿಯೊವನ್ನು ಯೂಟ್ಯೂಬರ್ ಅನ್ನಿ ಅರುಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
'ನಾನು ಇಂದು ಮದುವೆಗೆ ಹಾಜರಾಗುತ್ತಿದ್ದೇನೆ. ಇದು ಟ್ವೀಟ್ ಮಾಡಬಹುದಾದ ವಿಚಾರವೇ ಎಂದು ನೀವು ಕೇಳಬಹುದು. ಪರವಾಗಿಲ್ಲ, ವಿಷಯ ಏನೆಂದರೆ, 30 ವರ್ಷಗಳ ಹಿಂದೆಯೇ ವಧು-ವರ ಮೃತಪಟ್ಟಿದ್ದಾರೆ. ಇಂದು ನಡೆಯುತ್ತಿರುವುದು ಅವರ ಮದುವೆ. ಸಂಪ್ರದಾಯವೆಂದರೆ ಮೂಗು ಮುರಿಯುವವರಿಗೆ ಇದು ತಮಾಷೆಯ ಸಂಗತಿ ಎನಿಸಬಹುದು' ಎಂದು ಅನ್ನಿ ಅರುಣ್ ಟ್ವೀಟ್ ಮಾಡಿದ್ದಾರೆ.
ಹುಟ್ಟಿದ ತಕ್ಷಣವೇ ಮೃತಪಟ್ಟಿದ್ದವರಿಗೆ, ಮನೆಯಲ್ಲಿ ಮತ್ತೊಂದು ಮಗು ಜನಿಸಿದ ಸಂದರ್ಭದಲ್ಲಿ ಸಂಪ್ರದಾಯಬದ್ಧವಾಗಿ ಮದುವೆ (ಪ್ರೇತ ಕಲ್ಯಾಣ) ಮಾಡಿಸಲಾಗುತ್ತದೆ. ಮೃತಪಟ್ಟ ಗಂಡು ಹಾಗೂ ಹೆಣ್ಣಿನ ಮನೆಯವರು ನಿಶ್ಚಿತಾರ್ಥವನ್ನೂ ನೆರವೇರಿಸುತ್ತಾರೆ. ಆರತಕ್ಷತೆ, ಸಪ್ತಪದಿಯೂ ನಡೆಯುತ್ತದೆ. ಈ ಸಂಪ್ರದಾಯವು ದಕ್ಷಿಣ ಕನ್ನಡದಲ್ಲಿ ಆಚರಣೆಯಲ್ಲಿದೆ ಎಂದು ಅರುಣ್ ವಿವರಿಸಿದ್ದಾರೆ.
ಈ ವಿಶೇಷ ಸಂಭ್ರಮದಲ್ಲಿ ಇಡ್ಲಿ, ಮಟನ್ ಗ್ರೇವಿ, ಮೀನಿನ ಫ್ರೈ, ಚಿಕನ್ ಸುಕ್ಕ, ಕಡ್ಲೆ ಬಲ್ಯಾರ್ ಖಾದ್ಯಗಳನ್ನು ಒಳಗೊಂಡ ಭೋಜನ ವ್ಯವಸ್ಥೆ ಸಾಕ್ಷಿಯಾಗಿದೆ.
ಈ ಜೋಡಿ ಮರಣಾನಂತರದ ಜೀವನದಲ್ಲಿ ಸಂತೋಷದಿಂದ ಬದುಕುತ್ತಾರೆ ಎಂಬುದು 'ಪ್ರೇತ ಕಲ್ಯಾಣ'ದ ನಂಬಿಕೆಯಾಗಿದೆ.
AnnyArun
AnnyArun’s Tweets
Who to follow
ಪ್ರೇತಗಳ ಮದುವೆ ಎಂದರೇನು?
ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ನಂಬಿಕೆಯಿಂದಲೇ ಮನೆ ಮಾತಾಗಿರುವ ಕರಾವಳಿ ಭಾಗದ ಇನ್ನೊಂದು ವಿಶೇಷ ಎಂದರೆ 'ಪ್ರೇತಗಳ ಮದುವೆ'. ಪ್ರತಿ ವರ್ಷದ ಆಷಾಢ ಮಾಸದಲ್ಲಿ ಇಲ್ಲಿ ಪ್ರೇತಗಳಿಗೆ ಮದುವೆ ಮಾಡುತ್ತಾರೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂಬುದು ಆ ಭಾಗದ ನಂಬಿಕೆ. ಹೆಣ್ಣು ಅಥವಾ ಗಂಡು ಯಾರೇ ಇರಬಹುದು.
ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟರೆ ಅವರ ಆತ್ಮ ಪ್ರೇತವಾಗಿ ಅಲೆಯುತ್ತಿರುತ್ತದೆ. ಅಲ್ಲದೇ ಆ ಪ್ರೇತ ಮದುವೆ ವಯಸ್ಸಿಗೆ ಬಂದಾಗ ಮನೆಯವರಿಗೆ ತೊಂದರೆ ಕೊಡಲು ಆರಂಭಿಸುತ್ತದೆ. ಅದರಲ್ಲೂ ಆ ಪ್ರೇತಾತ್ಮದ ಅಣ್ಣನೋ, ತಂಗಿಯೋ ಮದುವೆಯಾಗುವ ಸಂದರ್ಭದಲ್ಲಿ ಈ ಪ್ರೇತದ ಕಿರುಕುಳ ಅಧಿಕವಾಗುತ್ತದೆ. ಆಗ ಮನೆಯವರು ವಾಡಿಕೆಯಲ್ಲಿರುವಂತೆ ಜೋತಿಷಿ ಅಥವಾ ಮಂತ್ರವಾದಿಗಳ ಬಳಿಗೆ ಹೋಗುತ್ತಾರೆ. ಆ ಮೂಲಕ ಅವರ ಮನೆಯಲ್ಲಿ ಸತ್ತ ಆತ್ಮವೊಂದು ಶಾಂತಿ ಸಿಗದೆ ಅಲೆದಾಡುತ್ತಿದೆ.
ಅದಕ್ಕೆ ಮದುವೆ ಮಾಡಿಸಿ ಅತೃಪ್ತ ಆತ್ಮವನ್ನು ತೃಪ್ತಿಗೊಳಿಸಬೇಕು ಎಂಬ ಹುಟ್ಟುಗತಿ(ಅಂಶ) ತಿಳಿದು ಬರುತ್ತದೆ. ಆಗ ಆ ಪ್ರೇತಕ್ಕೆ ಮದುವೆ ಮಾಡಿಸಿ ಸದ್ಗತಿ ಕಾಣಿಸುತ್ತಾರೆ. ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕಾಗಲಿ ಅಥವಾ ತಮ್ಮ ಕುಟುಂಬದ ಮುಂದಿನ ಪೀಳಿಗೆಗಾಗಲಿ ಯಾವುದೇ ತೊಂದರೆ ಬಾರದಿರಲಿ ಎಂಬುದು ಪ್ರೇತ ಮದುವೆಯ ಮೂಲ ಉದ್ದೇಶ. ಮದುವೆ ಮಾಡಿಸಿದ ಮೇಲೆ ಅತೃಪ್ತ ಆತ್ಮ ಸಂತೃಪ್ತವಾಗುವ ಮೂಲಕ ಮನೆಯವರಿಗೆ ಉಪದ್ರವ ನೀಡುವುದು ನಿಲ್ಲಿಸುತ್ತದೆ.
ಪ್ರೇತದ ಮದುವೆಗೆ ಸಾಮಾನ್ಯವಾಗಿ ಸಂಬಂಧಿಕರಲ್ಲೇ ಗಂಡು ಹೆಣ್ಣು ಹುಡುಕುತ್ತಾರೆ. ಸಿಗದಿದ್ದ ಪಕ್ಷದಲ್ಲಿ ದಲ್ಲಾಳಿಗಳೋ, ಜೋತಿಷಿ, ಮಂತ್ರವಾದಿಗಳಿಗೆ ತಿಳಿದಿರುವ ಪ್ರೇತದಲ್ಲೇ ತಮ್ಮ ಜಾತಿಯ ಪ್ರೇತವನ್ನು ಹುಡುಕಿ ಆ ಪ್ರೇತದ ಮನೆಯವರೊಂದಿಗೆ ಹೊಸ ಸಂಬಂಧವನ್ನು ಕುದುರಿಸುತ್ತಾರೆ.
ಸಂಬಂಧ ನಿಗದಿಯಾದ ಮೇಲೆ ಹುಡುಗನ ಮನೆಯವರು ಹುಡುಗಿ ಮನೆಗೆ ಬಂದು ಗೋತ್ರ, ನಕ್ಷತ್ರ ಹೊಂದಾಣಿಕೆ ಮಾಡುವ ಮೂಲಕ ಮದುವೆ ದಿನಾಂಕ ನಿಶ್ಚಯ ಮಾಡಿಕೊಂಡು ಹೋಗುತ್ತಾರೆ. ಜೀವಂತ ಮದುವೆಗಳಂತೆ ಇಲ್ಲಿಯೂ ಕುಲ, ಗೋತ್ರ ಜಾತಿ ಎಲ್ಲವನ್ನು ಪರಿಗಣಿಸಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ.
ಪ್ರೇತಗಳ ಮದುವೆ ಸಂಪ್ರದಾಯ
ಮದುವೆ ಶಾಸ್ತ್ರ...
ಮದುವೆ ಶಾಸ್ತ್ರವೂ ಜೀವಂತ ಇರುವವರಿಗೆ ಮದುವೆ ಮಾಡಿಸಿದ ಹಾಗೇ ಶಾಸ್ತ್ರೋಕ್ತವಾಗಿಯೇ ನಡೆಯುತ್ತದೆ. ಆದರೆ ಸಾಮಾನ್ಯ ಮದುವೆಯಂತೆ ಹೋಮಕುಂಡದ ಎದುರು ಮದುವೆ ನಡೆಯುವುದಿಲ್ಲ. ಬದಲಾಗಿ ಎರಡು ಕುರ್ಚಿ ಅಥವಾ ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಮಾಡಲಾಗುತ್ತದೆ.
ಮದುವೆ ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂ ಮತ್ತು ಗಂಡಿಗೆ ಪಂಚೆ ಶಲ್ಯ ಎಲ್ಲವನ್ನು ತಂದು ಇರಿಸಿ ಒಂದು ಕಡೆ ಗಂಡು ಪ್ರೇತ, ಇನ್ನೊಂದು ಕಡೆ ಹೆಣ್ಣು ಪ್ರೇತ ಇದೆ ಎಂದು ಕಲ್ಪಿಸಿಕೊಂಡು ಮದುವೆ ಮಾಡಿಸಲಾಗುವುದು.
ಈ ಮದುವೆ ಶಾಸ್ತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ, ಉಡುಪಿ ಜಿಲ್ಲೆಗೂ ಕೊಂಚ ವ್ಯತ್ಯಾಸವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಡುಗ ಅಥವಾ ಹುಡುಗಿ ಮನೆಯಲ್ಲಿ ಮದುವೆ ಮಾಡಿಸುತ್ತಾರೆ. ಗುರಿಕಾರರು ಈ ಮದುವೆ ಮಾಡಿಸುವುದು ಇನ್ನೊಂದು ವಿಶೇಷ.
ಉಡುಪಿ ಜಿಲ್ಲೆಯಲ್ಲಿ ಎರಡು ಕುಟುಂಬಗಳು ಸೇರಿ ಕೂಡ್ಲು ತೀರ್ಥ ಎಂಬ ಜಲಪಾತದ ಬಳಿ ಮದುವೆ ಮಾಡಿ ಬರುತ್ತಾರೆ. ಇನ್ನೂ ಕೆಲವರು ಗೋಕರ್ಣದಲ್ಲಿ ಮದುವೆ ಮಾಡಿಸುತ್ತಾರೆ. ಹೀಗೆ ಮದುವೆ ಮಾಡುವುದರಿಂದ ಪ್ರೇತಾತ್ಮಗಳು ತಮ್ಮದೇ ಸಂಸಾರ ಕಟ್ಟಿಕೊಂಡು ಜೀವನ ನಡೆಸುತ್ತವೆ, ಬದುಕಿರುವ ತಮ್ಮ ಸಂಬಂಧಿಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎನ್ನುವುದು ಕರಾವಳಿ ಭಾಗದ ಜನರ ನಂಬಿಕೆ.
ಅಷ್ಟೇ ಅಲ್ಲದೇ ಪ್ರೇತಗಳಿಗೆ ಮದುವೆ ಮಾಡಿಸಿದ ಎರಡು ಕುಟುಂಬಗಳು ಮುಂದೆ ಸಂಬಂಧವನ್ನು ಹಾಗೇ ಉಳಿಸಿಕೊಂಡು ಬರುತ್ತಾರೆ. ತಮ್ಮ ಮನೆಯ ಎಲ್ಲಾ ಆಗು ಹೋಗುಗಳಲ್ಲೂ ಆ ಪ್ರೇತ ಕುಟುಂಬವನ್ನು ಕರೆಯುವುದು ಕೂಡ ವಾಡಿಕೆ. ಹೀಗೆ ಪ್ರೇತಗಳ ಮದುವೆ ಮಾಡುವ ಮೂಲಕ ಆತ್ಮಗಳಿಗೆ ಅಂತರ ಪಿಶಾಚಿಯಾಗದಂತೆ ಮಾಡುವುದು ತುಳುನಾಡಿನ ನಂಬಿಕೆಯಲ್ಲೊಂದು.