ಕೊಲಂಬೋ: ರನೀಲ್ ವಿಕ್ರಮ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಲಂಕಾ ಅಧ್ಯಕ್ಷ ಗೋಟಾಬಯಾ ರಾಜಪಕ್ಸ ಘೋಷಿಸಿದ್ದು, ಗೆಝೆಟ್ ಪ್ರಕಟಿಸಿದ್ದು, ಲಂಕಾದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಲಂಕಾದ ಸಂಸತ್ ಬಳಿ ಉಂಟಾದ ಘರ್ಷಣೆಯಲ್ಲಿ 35 ಮಂದಿ ಗಾಯಗೊಂಡಿದ್ದು, ಗುರುವಾರ ಬೆಳಿಗ್ಗೆ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ವಿಕ್ರಮ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಲಂಕಾದ ಹಾಲಿ ಪ್ರಧಾನಿಯಾಗಿರುವ ಸಿಂಘೆ ಅವರ ನಿವಾಸಕ್ಕೆ ನುಗ್ಗಿದ್ದಾರೆ.
ಸೇನಾ ಪಡೆಗಳ ಭದ್ರತೆಯನ್ನು ಉಲ್ಲಂಘಿಸಿದ ಪ್ರತಿಭಟನಾಕಾರರು ರಾಷ್ಟ್ರಧ್ವಜವನ್ನು ಪ್ರಧಾನಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ. ಅಶ್ರುವಾಯು ಹಾಗೂ ಜಲ ಫಿರಂಗಿಗಳ ಪ್ರಯೋಗದ ನಂತರವೂ ಪೊಲೀಸರಿಗೆ ಪ್ರತಿಭಟನಾ ನಿರತರನ್ನು ತಡೆಯುವುದು ಅಸಾಧ್ಯವಾಯಿತು.
ಶ್ರೀಲಂಕಾ ಅಧ್ಯಕ್ಷರು ಸರ್ಕಾರದ ವಿರೋಧಿ ಪ್ರತಿಭಟನೆಯನ್ನು ತಪ್ಪಿಸಿಕೊಳ್ಳಲು, ವಿದೇಶಕ್ಕೆ ತೆರಳಿದ್ದ ಬೆನ್ನಲ್ಲೇ ಬುಧವಾರ (ಜು.13) ರಂದು ಶ್ರೀಲಂಕಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ರಾಜಪಕ್ಸ ತಾವು ಬುಧವಾರದಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.