ನವದೆಹಲಿ :ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ವಿಧಿಸಿರುವ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ರಷ್ಯಾದಿಂದ ಭಾರತಕ್ಕೆ ಆಮದು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 3.7 ಪಟ್ಟು ಅಧಿಕವಾಗಿ 500 ಕೋಟಿ ಡಾಲರ್‌ಗೆ ಏರಿದೆ ಎಂದು ಅಧಿಕೃತ ಅಂಕಿ ಅಂಶ ಪ್ರಕಟಿಸಿದೆ.
ಪ್ರಮುಖವಾಗಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಎರಡು ತಿಂಗಳ ಒಟ್ಟು ಆಮದು ಪ್ರಮಾಣ 2021-22ನೇ ಹಣಕಾಸು ವರ್ಷದಲ್ಲಿ ಮಾಡಿಕೊಂಡ ಆಮದಿನ ಅರ್ಧದಷ್ಟಾಗಿದೆ ಎಂದು timesofindia.com ವರದಿ ಮಾಡಿದೆ.
ರಷ್ಯಾ ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ, ಭಾರತದ ಆಮದು ಪ್ರಮಾಣ ಮೂರೂವರೆ ಪಟ್ಟು ಹೆಚ್ಚಿ 860 ಕೋಟಿ ಡಾಲರ್ ಆಗಿದೆ. 2021ರ ಇದೇ ಅವಧಿಯಲ್ಲಿ ರಷ್ಯಾದಿಂದ 250 ಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
ಪೆಟ್ರೋಲಿಯಂ ಹೊರತಾಗಿ ರಸಗೊಬ್ಬರ ಮತ್ತು ಖಾದ್ಯ ತೈಲ ಕೂಡಾ ಗಣನೀಯ ಏರಿಕೆ ಕಂಡಿವೆ. ಕೋಕ್ ಕಲ್ಲಿದ್ದಲು ಮತ್ತು ಸ್ಟೆಮ್ ಕಲ್ಲಿದ್ದಲು ಆಮದು ಕೂಡಾ ಗಣನೀಯ ಹೆಚ್ಚಳ ದಾಖಲಿಸಿವೆ. ಅಮೂಲ್ಯ ಮತ್ತು ಅರೆ ಅಮೂಲ್ಯ ಹರಳುಗಳ ಆಮದು ಇಳಿಕೆ ಕಂಡಿವೆ.
ಹೆಚ್ಚುತ್ತಿರುವ ಆಮದಿನ ನಡುವೆ ದೇಶದಿಂದಾಗುವ ರಫ್ತು ಪ್ರಮಾಣ ಕುಸಿದಿದ್ದು, ವ್ಯಾಪಾರ ಕೊರತೆ ಪ್ರಮಾಣ 2022-23ರ ಮೊದಲ ಎರಡು ತಿಂಗಳಲ್ಲಿ 480 ಕೋಟಿ ಡಾಲರ್ ತಲುಪಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಇದು 90 ಲಕ್ಷ ಡಾಲರ್ ಆಗಿತ್ತು. 2022ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಖನಿಜ ತೈಲ ಆಮದು ಆರು ಪಟ್ಟು ಹೆಚ್ಚಿ 420 ಕೋಟಿ ಡಾಲರ್ ಆಗಿದೆ. ಈ ಪೈಕಿ ಕಚ್ಚಾ ಪೆಟ್ರೀಲಿಯಂ ಮೌಲ್ಯ 320 ಶತಕೋಟಿ ಆಗಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.