ಮಂಜೇಶ್ವರ: ಜಿಲ್ಲೆಯ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‍ಸಿ) ದಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ದಿ ಪ್ಯಾಕೇಜ್ ನಲ್ಲಿ ಅನುಮೋದನೆ ನೀಡಲಾಗಿದೆ. ಯೋಜನೆಗೆ 3.70 ಕೋಟಿ ಮೀಸಲಿಡಲಾಗಿದೆ. ಪ್ರಸ್ತುತ ಮಂಜೇಶ್ವರ ಸಿಎಚ್‍ಸಿಯಲ್ಲಿ ಸಿಬ್ಬಂದಿ ಹಾಗೂ ರೋಗಿಗಳಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿದ್ದು, ವಿಶೇಷ ಬ್ಲಾಕ್ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಹಾಗೂ ಆರೋಗ್ಯ ಕಾರ್ಯಕರ್ತರ ಬಹುದಿನಗಳ ಬೇಡಿಕೆಯಾಗಿತ್ತು.
3.70 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಟ್ಟಡದಲ್ಲಿ ಫಿಸಿಯೋಥೆರಪಿ ಕೊಠಡಿ, ವೀಕ್ಷಣಾ ಕೊಠಡಿ, 3 ಒಪಿ ಕೊಠಡಿಗಳು, 2 ಉಪಶಾಮಕ ಒಪಿ ಕೊಠಡಿಗಳು, ನರ್ಸಿಂಗ್ ಸ್ಟೇಷನ್, ಇಸಿಜಿ ಕೊಠಡಿ, ಸ್ಟೋರ್ ರೂಂ, ಫಾರ್ಮಸಿ, ಫಾರ್ಮಸಿ ಸ್ಟೋರ್ ರೂಂ, ಸ್ಟಾಫ್ ನರ್ಸ್ ರೂಂ, ಮೈನರ್ ಓ.ಟಿ. ಮತ್ತು ಲ್ಯಾಬ್., ಕಾಯುವ ಪ್ರದೇಶ, ಇಂಜೆಕ್ಷನ್ ಕೊಠಡಿ, ಸ್ವಾಗತ, ರೋಗನಿರೋಧಕ ಕೊಠಡಿ ಮತ್ತು ಎಲ್ಲಾ ಇತರ ಸೌಲಭ್ಯಗಳನ್ನು ಒಳಗೊಂಡಿದೆ.
ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗದ ಎಕ್ಸಿಕ್ಯುಟಿವ್ ಅಭಿಯಂತರರು ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದಾರೆ. ಈ ಯೋಜನೆಯು ವಿಕಲಚೇತನರಿಗಾಗಿ ವಿಶೇಷ ರ್ಯಾಂಪ್ ಸೌಲಭ್ಯಗಳನ್ನು ಮತ್ತು ವೈದ್ಯರಿಗಾಗಿ ವಿಶೇಷ ಕ್ಯಾಬಿನ್‍ಗಳನ್ನು ಒಳಗೊಂಡಿದೆ. ಜಿಲ್ಲಾ ಆಸ್ಪತ್ರೆ, ಪುದಮಕಲ್ ತಾಲೂಕು ಆಸ್ಪತ್ರೆ, ಬೇಡಡ್ಕ ತಾಲೂಕು ಆಸ್ಪತ್ರೆ, ಎಫ್‍ಎಚ್‍ಸಿ ಪಾಣತ್ತೂರು, ಪಿಎಚ್‍ಸಿ ಮಾವಿಲಕಡಪ್ಪುರ ಮತ್ತು ಪಿಎಚ್‍ಸಿ ವೆಳ್ಳರಿಕುಂಡು ಎಂಬ ಆರು ಆರೋಗ್ಯ ಸಂಸ್ಥೆಗಳಿಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 7.08 ಕೋಟಿ ರೂ.ಮಂಜೂರಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿಯು ಯೋಜನೆಗೆ ಅನುಮೋದನೆ ನೀಡಿತು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್ ಅವರು, ಕಾಮಗಾರಿಯನ್ನು ಟೆಂಡರ್ ಕರೆದು ಕೂಡಲೇ ಆರಂಭಿಸಲಾಗುವುದು ಎಂದು ತಿಳಿಸಿದರು.