ಸಾಗರ್ : 39 ಮಕ್ಕಳಿಗೆ ಒಂದೇ ಸಿರಿಂಜ್ ಬಳಸಿ ಕೋವಿಡ್-19 ಲಸಿಕೆ ವಿತರಿಸಿರುವ ಪ್ರಕರಣ ಮಧ್ಯಪ್ರದೇಶದ ಸಾಗರ್ ನಗರದ ಖಾಸಗಿ ಶಾಲೆಯೊಂದರಲ್ಲಿ ಬುಧವಾರ ವರದಿಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಲಸಿಕೆ ಹಾಕುವವರು ಒಂದೇ ಸಿರಿಂಜ್ ಬಳಸುತ್ತಿದ್ದುದನ್ನು ಗಮನಿಸಿದ ಕೆಲವು ಮಕ್ಕಳ ಪೋಷಕರು, ಸಿಬ್ಬಂದಿಯ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಲಸಿಕೆ ಹಾಕಿದ ಸಿಬ್ಬಂದಿ ಜಿತೇಂದ್ರ ಅಹಿರ್ವಾರ್ ವಿರುದ್ಧ ಸದ್ಯ ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ, ಬೃಹತ್ ಲಸಿಕೆ ಅಭಿಯಾನದ ಭಾಗವಾಗಿ ನಗರದ ಜೈನ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಲಸಿಕೆ ಹಾಕುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಉಲ್ಲೇಖಿಸಲಾಗಿದೆ.
ಈ ಸಂಬಂಧ ಪೋಷಕರು ಪ್ರತಿಭಟಿಸಿದ ಬೆನ್ನಲ್ಲೇ ಜಿತೇಂದ್ರ ಪರಾರಿಯಾಗಿದ್ದಾರೆ. ಸಾಗರ್ ಉಸ್ತುವಾರಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಅವರು ಪ್ರಕರಣ ಕುರಿತು ಪರಿಶೀಲನೆ ನಡೆಸಲು ಜಿಲ್ಲಾ ವೈದ್ಯಕೀಯ ಹಾಗೂ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಡಿ.ಕೆ.ಗೋಸ್ವಾಮಿ ಅವರನ್ನು ಶಾಲೆಗೆ ಕಳುಹಿಸಿದ್ದಾರೆ.
ಲಸಿಕೆ ಪಡೆದ 39 ಮಕ್ಕಳೂ 15 ವರ್ಷ ಮೇಲ್ಪಟ್ಟ ಹಾಗೂ 9ರಿಂದ 12ನೇ ತರಗತಿ ಒಳಗಿನವರಾಗಿದ್ದಾರೆ. ಸದ್ಯ ಎಲ್ಲ ಮಕ್ಕಳ ತಪಾಸಣೆ ನಡೆಸಲಾಗಿದ್ದು, 19 ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಉಳಿದ ಮಕ್ಕಳ ವರದಿಗಳು ಇನ್ನಷ್ಟೇ ಬರಬೇಕಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ.
ಜಿತೇಂದ್ರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 336 (ಜೀವಕ್ಕೆ ಕುತ್ತು ತರುವ ಅಥವಾ ಮತ್ತೊಬ್ಬರ ಸುರಕ್ಷತೆಗೆ ಧಕ್ಕೆ ಉಂಟುಮಾಡಿದ ಬೇಜವಾಬ್ದಾರಿ ವರ್ತನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.