ರಾಂಚಿ: ಸೆಲೆಬ್ರಿಟಿಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಅಥವಾ ದೇಹದಲ್ಲಿ ಏನಾದರೂ ನೋವು ಕಾಣಿಸಿಕೊಂಡರೆ, ಅವರು ಆಸ್ಪತ್ರೆಗೆ ಹೋಗಬೇಕು ಅಂತೇನಿಲ್ಲ. ಏಕೆಂದರೆ, ಆಸ್ಪತ್ರೆಯೇ ಅವರ ಮುಂದೆ ಬರುತ್ತದೆ. ದೊಡ್ಡ ದೊಡ್ಡ ವೈದ್ಯರು ಕೂಡ ಸೆಲೆಬ್ರಿಟಿಗಳಿಗೆ ಚಿಕಿತ್ಸೆ ಕೊಡಲು ನಾ ಮುಂದು ತಾ ಮುಂದು ಅಂತಾ ಬರುತ್ತಾರೆ.
ಕೂಲ್ ಕ್ಯಾಪ್ಟನ್ ಅಂತಾ ಹೇಳಿದಾಗಲೇ ನಮ್ಮ ಕಣ್ಣೆದುರಿಗೆ ಬರುವುದು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ವಿಶ್ವ ಕ್ರಿಕೆಟ್ನ ಪ್ರಖ್ಯಾತ ಆಟಗಾರ. ನಾಯಕತ್ವದಿಂದಲೇ ಎಲ್ಲರನ್ನೂ ಮೋಡಿ ಮಾಡಿದ ಅದ್ಭುತ ಕ್ರಿಕೆಟಿಗ. ಇದೀಗ ಧೋನಿ ಅವರು ತಮ್ಮ ಸರಳತೆಯಿಂದ ಸುದ್ದಿಯಾಗಿದ್ದಾರೆ. ತಮ್ಮ ಮೊಣಕಾಲು ನೋವಿಗೆ ಹಳ್ಳಿಯಲ್ಲಿ ವಾಸಿಸುವ ಸಾಮಾನ್ಯ ಆಯುರ್ವೇದಿಕ್ ವೈದ್ಯರ ಮೊರೆ ಹೋಗಿದ್ದಾರೆ. ಅಲ್ಲದೆ, ಕೇವಲ 40 ರೂಪಾಯಿ ಕೊಟ್ಟು ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟಕ ಆಟಗಾರ ಹಾಗೂ ಅದ್ಭುತ ಫಿನಿಶರ್ ಎಂದೇ ಖ್ಯಾತಿಯಾಗಿರುವ ಧೋನಿ, ಕಳೆದ ಕೆಲವು ತಿಂಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಸಾಕಷ್ಟು ವೈದ್ಯರನ್ನು ಸುತ್ತಿದ್ದರು ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಈ ವೇಳೆ ಧೋನಿ ಕಿವಿಗೆ ಬಿದ್ದಿದ್ದು, ವಂದನ್ ಸಿಂಗ್ ಖೆರ್ವಾರ್ ಹೆಸರು. ಇವರು ಆಯುರ್ವೇದಿಕ್ ಡಾಕ್ಟರ್. ರಾಂಚಿಯಿಂದ 70 ಕಿ.ಮೀ ದೂರದಲ್ಲಿರುವ ಲಪುಂಗ್ ದಟ್ಟಾರಣ್ಯ ಪ್ರದೇಶದಲ್ಲಿ ವಾಸವಿದ್ದಾರೆ. ತಮ್ಮ ಮೊಣಕಾಲು ನೋವಿಗೆ ಧೋನಿ ಖೆರ್ವಾರ್ ಅವರಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ವೈದ್ಯರ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಲ್ಸಿಯಂ ಕೊರತೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ತನ್ನ ಹೆತ್ತವರ ಚಿಕಿತ್ಸೆಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೋಡಿದ ನಂತರ ರಾಂಚಿಯ ಆಶ್ರಮದಲ್ಲಿ ಮೊಣಕಾಲಿನ ಚಿಕಿತ್ಸೆ ಪಡೆಯಲು ಧೋನಿ ನಿರ್ಧರಿಸಿದರು. ನಾಲ್ಕು ದಿನಗಳಿಗೊಮ್ಮೆ ಆಶ್ರಮಕ್ಕೆ ಬರುತ್ತಿರುವ ಧೋನಿ, ಕಳೆದ ಒಂದು ತಿಂಗಳಿನಿಂದ ವೈದ್ಯರನ್ನು ಕಾಣುತ್ತಿದ್ದಾರೆ. ಇದೀಗ ಧೋನಿ ಕೂಡ ಗುಣಮುಖರಾಗಿದ್ದಾರೆ.
ಧೋನಿ ಚಿಕಿತ್ಸೆ ಬಗ್ಗೆ ಮಾತನಾಡಿರುವ ಡಾಕ್ಟರ್ ವಂಚನ್, ಸಮಾಲೋಚನೆ ಶುಲ್ಕವಾಗಿ 20 ರೂಪಾಯಿ ಹಾಗೂ 20 ರೂ. ಮೆಡಿಸಿನ್ಗೆ ಚಾರ್ಜ್ ಮಾಡುತ್ತೇನೆ. ಒಟ್ಟು 40 ರೂಪಾಯಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಧೋನಿ ಅವರು ನನ್ನನ್ನು ಬಂದು ಭೇಟಿಯಾದಾಗ ಅವರನ್ನು ಗುರುತು ಹಿಡಿಯಲು ಆಗಲಿಲ್ಲ. ನನ್ನ ಸಂಬಂಧಿಕರೊಬ್ಬರು ಹೇಳಿದಾಗ ನನಗೆ ಅವರ ಬಗ್ಗೆ ತಿಳಿಯಿತು. ನಾನು ಧೋನಿ ಅವರ ಪಾಲಕರಿಗೂ ಚಿಕಿತ್ಸೆ ನೀಡಿದ್ದೇನೆ. ಅವರು ಕೂಡ ಮೂರು ತಿಂಗಳಿಂದ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.