ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ನೆರೆಯ ದ್ವೀಪರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಜುಲೈ 9 ರಂದು ನಡೆಸಿದ ಪ್ರತಿಭಟನೆಯಲ್ಲಿ ಉದ್ರಿಕ್ತ ಗುಂಪೊಂದು ತಮ್ಮ ಖಾಸಗಿ ನಿವಾಸದಲ್ಲಿ ಬೆಂಕಿ ಹಚ್ಚಿದ್ದರಿಂದ 125 ವರ್ಷ ಹಳೆಯದಾದ ಪಿಯಾನೋ ಹಾಗೂ 4,000 ಪುಸ್ತಕಗಳು ನಾಶವಾಗಿರುವುದಾಗಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಹೇಳಿದ್ದಾರೆ.
ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸ ಮತ್ತಿತರ ಪ್ರಮುಖ ಕಟ್ಟಡಗಳಿಗೆ ದಾಳಿ ನಡೆಸಿದ ನಂತರ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸದಲ್ಲೂ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಅತ್ಯಮೂಲ್ಯವಾದ ಸಂರಕ್ಷಿಸಬೇಕಾದ ಅನೇಕ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಎಂದು ವಿಕ್ರಮ ಸಿಂಘೆ ಟಿವಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶತಮಾನಕ್ಕೂ ಹಳೆಯದಾದ ಕೆಲವೊಂದು ವಸ್ತುಗಳು ಸೇರಿದಂತೆ 4,000 ಕ್ಕೂ ಹೆಚ್ಚು ವಸ್ತುಗಳನ್ನು ಕಳೆದುಕೊಂಡಿದ್ದೇನೆ. ಬೆಂಕಿಯಲ್ಲಿ 125 ವರ್ಷ ಹಳೆಯದಾದ ಪಿಯಾನೋ ಕೂಡಾ ನಾಶವಾಗಿದೆ ಎಂದು ಅವರು ಹೇಳಿದ್ದಾರೆ. ವಿಕ್ರಮ್ ಸಿಂಘೆ ಅವರ ಮನೆಗೆ ಪ್ರತಿಭಟನಾಕಾರರು ನುಗ್ಗಿ ವಸ್ತುಗಳನ್ನು ಹಾಳು ಮಾಡುತ್ತಿರುವ ವಿಡಿಯೋವೊಂದನ್ನು ಡೈಲಿ ಮಿರರ್ ನ್ಯೂಸ್ ತನ್ನ ಟ್ವೀಟರ್ ನಲ್ಲಿ ಜುಲೈ 10 ರಂದು ಬಿಡುಗಡೆ ಮಾಡಿತ್ತು.
ಶಾಂತಿಯುತವಾಗಿ ಪ್ರತಿಭಟಿಸುವ ಪ್ರತಿಭಟನಾಕಾರರ ಹಕ್ಕುಗಳನ್ನು ಗೌರವಿಸುತ್ತೇನೆ ಆದರೆ, ಅಧ್ಯಕ್ಷರ ಪ್ಯಾಲೇಸ್ ಅಥವಾ ಪ್ರಧಾನ ಮಂತ್ರಿಯ ಖಾಸಗಿ ನಿವಾಸದಂತಹ ಯಾವುದೇ ಇತರ ಸರ್ಕಾರಿ ಕಟ್ಟಡಗಳನ್ನು ಆಕ್ರಮಿಸಿಕೊಳ್ಳಲು ನಾನು ಅವಕಾಶ ನೀಡಲ್ಲ ಎಂದು ವಿಕ್ರಮ್ ಸಿಂಘೆ ಹೇಳಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಮುತ್ತಿಗೆಯಾಗದಂತೆ ಶ್ರೀಲಂಕಾ ಸಶಸ್ತ್ರ ಪಡೆ ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಂಗಾಮಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ.