ಚೆನ್ನೈ: ಬಹುನಿರೀಕ್ಷಿತ 44ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್ಗೆ ಚೆನ್ನೈನಲ್ಲಿ ಗುರುವಾರ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಚದುರಂಗದಾಟ ಕಾವೇರಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಆತಿಥೇಯ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿ.
ಚದುರಂಗದ ಮಹಾಕದನಕ್ಕೆ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ತಮಿಳುನಾಡಿನಲ್ಲಿ ವಿವಿಧ ಕ್ರೀಡೆಗಳನ್ನು ಪ್ರತಿನಿಧಿಸುವ ಸುಂದರವಾದ ಶಿಲ್ಪಗಳನ್ನು ಹೊಂದಿರುವ ಅನೇಕ ದೇವಾಲಯಗಳಿವೆ. ತಮಿಳುನಾಡು ಚೆಸ್‌ನೊಂದಿಗೆ ಬಲವಾದ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ರಾಜ್ಯವು ಅನೇಕ ಚೆಸ್ ಪಟುಗಳನ್ನು ಸೃಷ್ಟಿಸಿದೆ. ಇದು ರೋಮಾಂಚಕ ಸಂಸ್ಕೃತಿಯ ನೆಲೆಯಾಗಿದೆ ಮತ್ತು ಅತ್ಯಂತ ಹಳೆಯ ಭಾಷೆ 'ತಮಿಳು' ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್, ಕ್ರೀಡಾ ಸಚಿವ ಅನೂರಾಗ್ ಠಾಕೂರ್, ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆ. 10ರವರೆಗೆ ಸ್ಪರ್ಧೆ ನಡೆಯಲಿದೆ.
2020ರಲ್ಲಿ ಆನ್ಲೈನ್ ಮೂಲಕ ನಡೆದಿದ್ದ ಒಲಿಂಪಿಯಾಡ್ನಲ್ಲಿ ಭಾರತ, ರಷ್ಯಾದ ಜತೆ ಜಂಟಿ ಚಾಂಪಿಯನ್ ಆಗಿತ್ತು ಮತ್ತು 2014, 2021ರಲ್ಲಿ ಕಂಚು ಜಯಿಸಿತ್ತು. ಈ ಬಾರಿ ಬೋರ್ಡ್ ಮೇಲಿನ ಕಾದಾಟದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕುವ ಅವಕಾಶ ಭಾರತದ ಮುಂದಿದೆ.
5 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಸ್ಥಳೀಯ ತಾರೆ ವಿಶ್ವನಾಥನ್ ಆನಂದ್ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ. ಪಿ. ಹರಿಕೃಷ್ಣ, ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ, ಕೆ. ಶಶಿಕಿರಣ್ ಮತ್ತು ಎಸ್ಎಲ್ ನಾರಾಯಣನ್ ಒಳಗೊಂಡ ಭಾರತ ಎ ತಂಡ ಬಲಿಷ್ಠವಾಗಿದ್ದು, 2ನೇ ಶ್ರೇಯಾಂಕ ಪಡೆದಿದೆ. ಭಾರತ ಬಿ ತಂಡ 11 ಮತ್ತು ಸಿ ತಂಡ 16ನೇ ಶ್ರೇಯಾಂಕ ಪಡೆದಿದೆ.
ಮಹಿಳೆಯರ ವಿಭಾಗದಲ್ಲೂ ಕೊನೆರು ಹಂಪಿ, ತುಂಬು ಗರ್ಭಿಣಿಯಾಗಿರುವ ನಡುವೆಯೂ ಸ್ಪರ್ಧಿಸುತ್ತಿರುವ ದ್ರೋಣವಲ್ಲಿ ಹರಿಕಾ ಮತ್ತು ತಾನಿಯಾ ಸಚ್ದೇವ್ ಒಳಗೊಂಡ ಭಾರತ ಎ ತಂಡ ಬಲಿಷ್ಠವಾಗಿದೆ.