ಬರೇಲಿ: ಮಂಗವೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ ನಾಲ್ಕು ತಿಂಗಳ ಗಂಡು ಮಗುವನ್ನ ಎಸೆದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.
ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ಪತ್ನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದಿವೆ. ದಂಪತಿ ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವೇಳೆ ನಿರ್ದೇಶ್ ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ, ಮಗು ಅವರ ಕೈಯಿಂದ ಕೆಳಗೆ ಜಾರಿ ಬಿದ್ದಿದೆ. ನಿರ್ದೇಶ್ ಮಗುವನ್ನು ಹಿಡಿಯುವ ಮೊದಲು, ಕೋತಿಯು ನವಜಾತ ಶಿಶುವನ್ನು ಹಿಡಿದು ಛಾವಣಿಯಿಂದ ಎಸೆದಿದೆ. ಮಗು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದೆ.