ತಿರುವನಂತಪುರ: ‘ಪೋಷಕಬಾಲ್ಯ’ ಯೋಜನೆಯ ಅಂಗವಾಗಿ ಶಾಲಾ ಪೂರ್ವ ಅಂಗನವಾಡಿ ಮಕ್ಕಳಿಗೆ ಆಗಸ್ಟ್ 1ರಿಂದ ಹಾಲು ಮತ್ತು ಮೊಟ್ಟೆ ನೀಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಘೋಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಎಲ್ಲ 33,115 ಅಂಗನವಾಡಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು, ವಾರದಲ್ಲಿ ಎರಡು ದಿನ ಮೊಟ್ಟೆ ಮತ್ತು ಎರಡು ದಿನ ಹಾಲು ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಮಗುವಿಗೆ ವಾರದ ಸೋಮವಾರ ಮತ್ತು ಗುರುವಾರದಂದು ದಿನಕ್ಕೆ ಒಂದು ಲೋಟ ಹಾಲು ಮತ್ತು ವಾರದ ಮಂಗಳವಾರ ಮತ್ತು ಶುಕ್ರವಾರ ಮೊಟ್ಟೆಗಳನ್ನು ನೀಡಲಾಗುತ್ತದೆ. ಅಂಗನವಾಡಿಯಲ್ಲಿರುವ 3 ರಿಂದ 6 ವರ್ಷದೊಳಗಿನ ಸುಮಾರು 4 ಲಕ್ಷ ಪ್ರಿ ್ರಸ್ಕೂಲ್ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಮಕ್ಕಳ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರೋಗ್ಯ ಬೆಳವಣಿಗೆಗೆ ಒತ್ತು ನೀಡುವ ಆರು ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಪ್ರಮುಖವಾದ ಸೇವೆಯೆಂದರೆ ಪೂರಕ ಪೌಷ್ಟಿಕಾಂಶ ಯೋಜನೆ. ಈ ಯೋಜನೆಯಡಿ 6 ತಿಂಗಳಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಅಂಗನವಾಡಿಗಳ ಮೂಲಕ ಪೂರಕ ಪೌಷ್ಟಿಕಾಂಶವನ್ನು ನೀಡಲಾಗುತ್ತದೆ. ಇದಲ್ಲದೇ ಅಂಗನವಾಡಿ ಮೆನುವಿನಲ್ಲಿ ಹಾಲು ಮತ್ತು ಮೊಟ್ಟೆಯನ್ನು ಸೇರಿಸಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ಹಾಲನ್ನು ಮಿಲ್ಮಾ, ಸ್ಥಳೀಯ ಡೇರಿ ಸೊಸೈಟಿ, ಕುಟುಂಬಶ್ರೀ ಮತ್ತು ಹೈನುಗಾರರ ಮೂಲಕ ಅಂಗನವಾಡಿಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಈ ಯಾವ ವ್ಯವಸ್ಥೆಯೂ ಇಲ್ಲದ ಗುಡ್ಡಗಾಡು ಗ್ರಾಮೀಣ ಪ್ರದೇಶದ 220 ಅಂಗನವಾಡಿಗಳಿಗೆ ಮಿಲ್ಮಾದ ಯುಎಚ್ ಟಿ ಹಾಲು ವಿತರಿಸಲಾಗುವುದು. ಅಂಗನವಾಡಿಗಳಲ್ಲಿ ಉಲ್ಲಾಸಭರಿತ ಶಿಕ್ಷಣದ ಜೊತೆಗೆ ಆರೋಗ್ಯಕರ ಬಾಲ್ಯವನ್ನು ಮುಖ್ಯವಾಗಿಸುವ ಉದ್ದೇಶವನ್ನು ಈ ಯೋಜನೆಯ ಮೂಲಕ ಸಾಧಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಗೆ ತಂದಿರುವ 61.5 ಕೋಟಿ ರೂ.ಗಳ ಬಾಲ್ಯದ ಪೌಷ್ಟಿಕಾಂಶ ಯೋಜನೆಯನ್ನು ಆಗಸ್ಟ್ 1ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಡಿಪಿಐ ಜವಾಹರ ಸಹಕಾರಿ ಭವನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆ ವಹಿಸುವರು.
ಅಂಗನವಾಡಿ ಮಕ್ಕಳಿಗೆ ನಾಳೆಯಿಂದ ಹಾಲು ಮತ್ತು ಮೊಟ್ಟೆ: ಸುಮಾರು 4 ಲಕ್ಷ ಪುಟಾಣಿಗಳಿಗೆ ಪ್ರಯೋಜನ: ಸಚಿವೆ ವೀಣಾ ಜಾರ್ಜ್
0
ಜುಲೈ 31, 2022