ಕೊಚ್ಚಿ: ಪ್ರವಾಸಕ್ಕಾಗಿ 2022 ರಲ್ಲಿ ಜಗತ್ತಿನಾದ್ಯಂತ ಇರುವ ಅತ್ಯುತ್ತಮ ತಾಣಗಳ ಬಗ್ಗೆ ಟೈಮ್ ನಿಯತಕಾಲಿಕೆ ಪ್ರಕಟಿಸಿದ್ದು ಕೇರಳವೂ ಸ್ಥಾನ ಪಡೆದಿದೆ.
ಜಗತ್ತಿನ ಅತ್ಯುತ್ತಮ ತಾಣಗಳ ಪಟ್ಟಿ-2022 ರಲ್ಲಿ ಕೇರಳ 9 ನೇ ಶ್ರೇಣಿ ಪಡೆದಿದ್ದು, ಅದ್ಭುತವಾದ ಕಡಲತೀರಗಳು ಮತ್ತು ಸೊಂಪಾದ ಹಿನ್ನೀರು, ದೇವಾಲಯಗಳು ಮತ್ತು ಅರಮನೆಗಳೊಂದಿಗೆ ಇರುವ ಪರಿಸರ-ಪ್ರವಾಸೋದ್ಯಮ ಹಾಟ್ ಸ್ಪಾಟ್ ಆಗಿದ್ದು ದೇವರ ನಾಡು ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಅಮೆರಿಕದ ನಿಯತಕಾಲಿಕೆ ಬರೆದಿದೆ.
ವಾಗಮೋನ್‌ನಲ್ಲಿ ತೆರೆಯಲಾದ ಕೇರಳದ ಮೊದಲ ಕಾರವಾನ್ ಪಾರ್ಕ್, 'ಕರವನ್ ಮೆಡೋಸ್' ನ್ನೂ ಟೈಮ್ ನಿಯತಕಾಲಿಕೆ ಗುರುತಿಸಿದೆ.
ರಾಜ್ಯದಲ್ಲಿ ಹೌಸ್‌ಬೋಟ್ ಕ್ರೂಸಿಂಗ್ ಗಳ ಯಶಸ್ಸಿನ ಹಿನ್ನೆಲೆಯಲ್ಲಿ ಕಾರವಾನ್‌ಗಳು ಇದೇ ರೀತಿಯ ಭರವಸೆಯ ಸುಸ್ಥಿರ ಪ್ರವಾಸೋದ್ಯಮವನ್ನು ಅನುಸರಿಸುವ ನಿರೀಕ್ಷೆಯಿದೆ ಎಂದು ಟೈಮ್ ನಿಯತಕಾಲಿಕೆ ಹೇಳಿದೆ.
ರಾಸ್ ಅಲ್ ಖೈಮಾ (ಯುಎಇ), ಪಾರ್ಕ್ ಸಿಟಿ (ಉತಾಹ್, ಯುಎಸ್), ಗ್ಯಾಲಪಗೋಸ್ ದ್ವೀಪಗಳು, ಝೆಕ್ ರಿಪಬ್ಲಿಕ್ ನ ಡೋಲ್ನಿ ಮೊರಾವಾ, ಸಿಯೋಲ್, ಆಸ್ಟ್ರೇಲಿಯಾದಲ್ಲಿರುವ ಗ್ರೇಟ್ ಬಾರಿಯರ್ ರೀಫ್, ದೋಹಾ ಹಾಗೂ ಡೆಟ್ರಾಯಿಟ್ ಗಳು ಟೈಮ್ಸ್ ನ 50 ತಾಣಗಳ ಪಟ್ಟಿಯಲ್ಲಿ ಕೇರಳಕ್ಕಿಂತಲೂ ಅಗ್ರ ಶ್ರೇಣಿಯಲ್ಲಿರುವ ತಾಣಗಳಾಗಿವೆ.