ನವದೆಹಲಿ: ಶೀರ್ಷಿಕೆ ನೋಡಿ ಇದ್ಯಾರಪ್ಪ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಅಭ್ಯರ್ಥಿಗಳಿಗಿಂತೆಯೇ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ವ್ಯಕ್ತಿ ಎಂದು ಗೊಂದಲಕ್ಕೀಡಾಗಬೇಡಿ.. ಈ ಮಿಸ್ಟರ್ ಬ್ಯಾಲಟ್ ಬಾಕ್ಸ್ ಎಂಮ್ಬುದು 53 ವರ್ಷಗಳ ಸಂಪ್ರದಾಯವಾಗಿದ್ದು, ಈ ರೀತಿ ರಾಜ್ಯಗಳಿಗೆ ಪ್ರಯಾಣಿಕರೊಂದಿಗೆ ವಿಮಾನಗಳಲ್ಲಿ ಪ್ರಯಾಣಿಸುವುದು ಒಂದು ವಸ್ತುವಾಗಿದೆ!
ಜು.18 ರಂದು ವಿವಿಧ ರಾಜ್ಯಗಳಿಗೆ ವೋಟ್ ಕಂಟೇನರ್ ಗಳನ್ನು ಕಳಿಸುವುದಕ್ಕಾಗಿ, ಮಂಗಳವಾರ ಹಾಗೂ ಬುಧವಾರ ಚುನಾವಣಾ ಆಯೋಗ ಮಿಸ್ಟರ್ ಬ್ಯಾಲಟ್ ಬಾಕ್ಸ್ ಗೆ ಟಿಕೆಟ್ ಬುಕ್ ಮಾಡಿದೆ.
ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಮಿಸ್ಟರ್ ಬ್ಯಾಲಟ್ ಬಾಕ್ಸ್ ಹೆಸರಿನಲ್ಲಿಯೇ ಪ್ರತ್ಯೇಕವಾದ ವಿಮಾನ ಟಿಕೆಟ್ ನ್ನು ಕಾಯ್ದಿರಿಸಲಾಗುತ್ತದೆ. ಈ ರೀತಿ ಕಾಯ್ದಿರಿಸಲಾದ ಟಿಕೆಟ್ ಮೂಲಕ ಮಿ. ಬ್ಯಾಲಟ್ ಬಾಕ್ಸ್ ನ್ನು ವಿಮಾನದ ಮೊದಲ ಸಾಲಿನಲ್ಲಿರಿಸಿ ಸಾಗಿಸಲಾಗುತ್ತದೆ. ಇದರ ಪಕ್ಕದಲ್ಲೇ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ (ಎಆರ್ ಒ) ಗಳು ಕುಳಿತು ಪ್ರಯಾಣಿಸಲಿದ್ದಾರೆ. ಈ ಬಾಕ್ಸ್ ನ ಮೇಲ್ವಿಚಾರಣೆಯನ್ನು ಸ್ವತಃ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.
ಚುನಾವಣೆಯ ನಂತರ ಈ ಬಾಕ್ಸ್ ಗಳು ಮತ್ತೆ ವಿಮಾನಗಳ ಮೂಲಕವೇ ದೆಹಲಿ ತಲುಪಲಿವೆ ಎಂದು ಚುನಾವಣಾ ಆಯೋಗ ಹೇಳಿದೆ. 1969 ರಲ್ಲಿ ಆಯೋಗ, ರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದಂತೆ ಬ್ಯಾಲಟ್ ಬಾಕ್ಸ್ ಮತ್ತು ಇತರ ಚುನಾವಣಾ ಸಾಮಗ್ರಿಗಳನ್ನು ಪ್ರಯಾಣಿಕರಂತೆ ಪರಿಗಣಿಸಿ ಸಾಗಿಸುವುದಕ್ಕಾಗಿ ಪ್ರಯಾಣಿಕ ವಿಮಾನಯಾನ ಇಲಾಖೆಯಿಂದ ವಿಶೇಷ ಅನುಮತಿ ಪಡೆದಿದೆ.
ವಿಮಾನಗಳ ಮೂಲಕ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿದ ಬಳಿಕ ಮಿ. ಬ್ಯಾಲಟ್ ಬಾಕ್ಸ್ ನ್ನು ಕಟ್ಟುನಿಟ್ಟಿನ ವೀಡಿಯೋಗ್ರಫಿ ಸಹಿತ ಸ್ಟ್ರಾಂಗ್ ರೂಮ್ ಗಳಲ್ಲಿ ಇರಿಸಲಾಗುತ್ತದೆ. ಚುನಾವಣೆ ಮುಕ್ತಾಯಗೊಂಡ ಬಳಿಕ ಮಿ.ಬ್ಯಾಲಟ್ ಬಾಕ್ಸ್ ಹಾಗೂ ಇತರ ಚುನಾವಣಾ ಸಾಮಗ್ರಿಗಳನ್ನು ರಾಜ್ಯಸಭಾ ಸಚಿವಾಲಯದ ರಿಟರ್ನಿಂಗ್ ಆಫೀಸರ್ ನ ಕಚೇರಿಗೆ ತಲುಪಿಸಲಾಗುತ್ತದೆ.
ರಾಷ್ಟ್ರಪತಿಗಳ ಚುನಾವಣೆಯ ಮತ ಎಣಿಕೆ ಜು.21 ರಂದು ನಡೆಯಲಿದ್ದು, ಜು.24 ಕ್ಕೆ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಪೂರ್ಣಗೊಳ್ಳಲಿದೆ. ಸಂಸದರು ಹೊಸ ರಾಷ್ಟ್ರಪತಿಗಳ ಆಯ್ಕೆಗಾಗಿ ಸಂಸತ್ ಭವನದಲ್ಲೇ ಮತ ಚಲಾಯಿಸಲಿದ್ದಾರೆ.