ನವದೆಹಲಿ : ಏರ್ ಇಂಡಿಯಾ ವಿಮಾನ ಸಂಸ್ಥೆ ನಡೆಸುತ್ತಿರುವ ನೇಮಕಾತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಡಿಗೊದ ವಿಮಾನಗಳ ಕ್ಯಾಬಿನ್ ಸಿಬ್ಬಂದಿಯಲ್ಲಿ ಬಹುತೇಕರು ಅನಾರೋಗ್ಯ ರಜೆ (ಸಿಕ್ ಲೀವ್- ಎಸ್‌ಎಲ್) ಪಡೆದಿದ್ದರಿಂದ ಶನಿವಾರ ಇಂಡಿಗೊದ ಸಂಸ್ಥೆಯ ಶೇ 55 ದೇಶಿಯ ವಿಮಾನಗಳ ಸಂಚಾರದಲ್ಲಿ ವಿಳಂಬವಾಯಿತು.

ಭಾನುವಾರ ಈ ಬಗ್ಗೆ ಮಾಹಿತಿ ಕೇಳಿದಾಗ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮುಖ್ಯಸ್ಥ ಅರುಣ್ ಕುಮಾರ್ ಅವರು, 'ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು ಪ್ರತಿಕ್ರಿಯಿಸಿದರು.
'ಏರ್ ಇಂಡಿಯಾವು ಎರಡನೇ ಹಂತದ ನೇಮಕಾತಿಯನ್ನು ಶನಿವಾರ ನಡೆಸಿತು. ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಡಿಗೊದ ಬಹುತೇಕ ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯ ರಜೆ ಪಡೆದು, ನೇಮಕಾತಿಯಲ್ಲಿ ಭಾಗವಹಿಸಲು ಹೋಗಿದ್ದರು' ಎಂದು ವಿಮಾನ ಸೇವೆ ಉದ್ಯಮದ ಮೂಲಗಳು ಹೇಳಿವೆ. ಆದರೆ, ಇಂಡಿಗೊ ಸಂಸ್ಥೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇಂಡಿಗೊ ದೇಶದ ಬಹುದೊಡ್ಡ ವಿಮಾನ ಸೇವಾ ಸಂಸ್ಥೆಯಾಗಿದ್ದು, ಸದ್ಯ ಪ್ರತಿ ದಿನ ಅಂದಾಜು 1,600 ವಿಮಾನಗಳು ದೇಶಿಯ ಮತ್ತು ಅಂತರರಾಷ್ಟ್ರೀಯ ಮಾರ್ಗದಲ್ಲಿ ಕಾರ್ಯಾಚರಿಸುತ್ತಿವೆ.
ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಇಂಡಿಗೊದ ದೇಶಿಯ ವಿಮಾನಗಳಲ್ಲಿ ಶೇ 45.2 ವಿಮಾನಗಳು ಮಾತ್ರ ಶನಿವಾರ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿವೆ.
ಟಾಟಾ ಸಮೂಹವು ಏರ್ ಇಂಡಿಯಾ ಸಂಸ್ಥೆಯನ್ನು ಜನವರಿ 27ರಂದು ಖರೀದಿಸಿದ ನಂತರ, ಹೊಸ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಉತ್ತಮ ಸೇವೆ ಒದಗಿಸಲು ಹೊಸ ವಿಮಾನಗಳ ಖರೀದಿ ಮತ್ತು ಹೊಸ ಸಿಬ್ಬಂದಿಯ ನೇಮಕಾತಿ ಆರಂಭಿಸಿದೆ.