ನವದೆಹಲಿ: ಭಾರತದ ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅದು ಇನ್ನೂ ಹೆಚ್ಚಾಗಬಹುದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.
ನವದೆಹಲಿ: ಭಾರತದ ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅದು ಇನ್ನೂ ಹೆಚ್ಚಾಗಬಹುದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.
ಔರಂಗಾಬಾದ್ನಲ್ಲಿರುವ ಮಹಾರಾಷ್ಟ್ರ ನ್ಯಾಷನಲ್ ಲಾ ಯೂನಿವರ್ಸಿಟಿಯ (ಎಂಎನ್ಎಲ್ಯುು) ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವರು, ಭಾರತದ ನ್ಯಾಯಾಂಗದ ಗುಣಮಟ್ಟ ವಿಶ್ವವಿಖ್ಯಾತವಾದುದು. ಎರಡು ದಿನಗಳ ಹಿಂದೆ ತಾವು ಲಂಡನ್ನಲ್ಲಿದ್ದಾಗ ಅಲ್ಲಿ ಭೇಟಿಯಾದ ಜನರು ಕೂಡ ಭಾರತದ ನ್ಯಾಯಾಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪಗಳನ್ನು ಬ್ರಿಟನ್ನಲ್ಲಿ ಆಗಾಗ ಉಲ್ಲೇಖಿಸಲಾಗುತ್ತದೆ ಎಂದರು.
ತಾವು ಈ ಖಾತೆಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಬಾಕಿಯಿರುವ ಕೇಸ್ ಸಂಖ್ಯೆ ನಾಲ್ಕು ಕೋಟಿಗಿಂತ ಸ್ವಲ್ಪ ಕಡಿಮೆಯಿತ್ತು. ಈಗ ಅದು ಐದು ಕೋಟಿಯಷ್ಟಾಗಿದೆ. ಇದು ನಮ್ಮೆಲ್ಲರಿಗೂ ಚಿಂತೆಯ ವಿಷಯವಾಗಿದೆ ಎಂದರು. ಪ್ರಕರಣಗಳ ಬಾಕಿಗೆ ನ್ಯಾಯ ನೀಡಿಕೆಯಲ್ಲಿನ ದಕ್ಷತೆಯ ಕೊರತೆ ಅಥವಾ ಸರ್ಕಾರದ ಬೆಂಬಲದ ಕೊರತೆ ಕಾರಣವಲ್ಲ. ಆದರೆ, ಏನಾದರೂ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದಿದ್ದರೆ ಬಾಕಿ ಕೇಸ್ಗಳ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ ಎಂದು ಎಚ್ಚರಿಸಿದರು.
ದಿನಕ್ಕೆ 50 ಪ್ರಕರಣ: ಬ್ರಿಟನ್ನಲ್ಲಿ ನ್ಯಾಯಾಧೀಶರು ದಿನವೊಂದಕ್ಕೆ ಸರಾಸರಿ 4-5 ತೀರ್ಪಗಳನ್ನು ನೀಡುತ್ತಾರೆ. ಆದರೆ ಭಾರತದಲ್ಲಿ ನ್ಯಾಯಾಧೀಶರು ಪ್ರತಿದಿನ ಸರಾಸರಿ 50 ಪ್ರಕರಣಗಳ ವಿಚಾರಣೆ ನಡೆಸಬೇಕಿದೆ. ಜನರು ಉತ್ತಮ ಗುಣಮಟ್ಟದ ತೀರ್ಪು ನಿರೀಕ್ಷಿಸುತ್ತಾರೆ. ನ್ಯಾಯಾಧೀಶರ ಮೇಲೆ ಇದರಿಂದ ಒತ್ತಡ ಹೆಚ್ಚಾಗಿದೆ. ಜತೆಗೆ ಶುಲ್ಕದಲ್ಲೂ ಭಾರಿ ಏರಿಕೆ ಕಂಡುಬರುತ್ತಿದೆ. ಬಡವರು, ಸಾಮಾನ್ಯ ಜನರು ಉತ್ತಮ ವಕೀಲರನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಸಚಿವ ರಿಜಿಜು ಅಸಮಾಧಾನ ವ್ಯಕ್ತಪಡಿಸಿದರು.