ನವದೆಹಲಿ: ದೇಶದಲ್ಲಿ 5ಜಿ ತರಂಗಾಂತರದ ಆನ್‌ಲೈನ್ ಹರಾಜು ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಸೇರಿದಂತೆ ನಾಲ್ಕು ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ. ಈ ಅವಧಿಯಲ್ಲಿ 4.3 ಲಕ್ಷ ಕೋಟಿ ಮೌಲ್ಯದ 72 GHz ತರಂಗಾಂತರದ ಬಿಡ್ಡಿಂಗ್ ನಡೆಯಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 6ರವರೆಗೆ ನಡೆಯಲಿದೆ.
5G ಸ್ಪೆಕ್ ಟ್ರಮ್ ಹರಾಜು ಪ್ರಕ್ರಿಯೆ 2 ದಿನ?
DoT ಮೂಲಗಳ ಪ್ರಕಾರ, ಹರಾಜು ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯವು 5G ಸ್ಪೆಕ್ಟ್ರಮ್‌ಗಾಗಿ ತೆಗೆದುಕೊಳ್ಳಬೇಕಾದ ಬಿಡ್‌ಗಳು ಮತ್ತು ಬಿಡ್‌ದಾರರ ತಂತ್ರವನ್ನು ಅವಲಂಬಿಸಿರುತ್ತದೆ. ತಜ್ಞರ ಪ್ರಕಾರ ಹರಾಜು ಪ್ರಕ್ರಿಯೆ ಎರಡು ದಿನ ಮುಂದುವರಿಯಬಹುದು. 5G ಸ್ಪೆಕ್ಟ್ರಮ್ ಹರಾಜಿನ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಟೆಲಿಕಾಂ ಸೇವಾ ಪೂರೈಕೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಜೊತೆಗೆ, ಮೊದಲ ಬಾರಿಗೆ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸಿದ ಗೌತಮ್ ಅದಾನಿ ಅವರ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಸಹ ಬಿಡ್ ಮಾಡಲಿದೆ.
ಟೆಲಿಕಾಂ ಇಲಾಖೆಗೆ 1 ಲಕ್ಷ ಕೋಟಿ ಆದಾಯ?
ದೇಶದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 5ಜಿ ತರಂಗಾಂತರದ ಹರಾಜಿನಿಂದ ದೂರಸಂಪರ್ಕ ಇಲಾಖೆಯು ರೂ.70,000 ಕೋಟಿಯಿಂದ ರೂ.1,00,000 ಕೋಟಿಗಳಷ್ಟು ಆದಾಯವನ್ನು ಪಡೆಯುವ ನಿರೀಕ್ಷೆಯಿದೆ. 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ, ದೇಶದಲ್ಲಿ 5ಜಿ ಸೇವೆಗಳು ಪ್ರಾರಂಭವಾಗುವ ಮಾರ್ಗವನ್ನು ತೆರವುಗೊಳಿಸಲಾಗುತ್ತದೆ. ತಜ್ಞರ ಪ್ರಕಾರ, ಸ್ಪೆಕ್ಟ್ರಮ್ ಹರಾಜಿನ ನಂತರ, ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ಸೇವೆಗಳಿಗೆ ಕೇಂದ್ರ ಸರಕಾರದಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ತಾಂತ್ರಿಕ ತಜ್ಞರ ಪ್ರಕಾರ, 5G ಸೇವೆಗಳು ದೇಶದಲ್ಲಿ ಪ್ರಸ್ತುತ 4G ಸೇವೆಗಳಿಗಿಂತ ಹತ್ತು ಪಟ್ಟು ವೇಗವಾಗಿರಲಿದೆ. 5G ಸೇವೆಯ ನಂತರ, ದೇಶದಲ್ಲಿ ಇಂಟರ್ನೆಟ್ ಬಳಕೆಯ ಅನುಭವವು ಗುಣಮಟ್ಟದಿಂದ ಕೂಡಿರಲಿದೆ. ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ, 5G ಸೇವೆಗಳ ಪರಿಚಯದೊಂದಿಗೆ ಹೊಸ ಕ್ರಾಂತಿಯನ್ನು ನಿರೀಕ್ಷಿಸಲಾಗಿದೆ.
5ಜಿ ಗಾಗಿ ಸ್ಪರ್ಧೆ, ಪೈಪೋಟಿ!
5G ಸ್ಪೆಕ್ಟ್ರಮ್ ಹರಾಜಿನ ಸಮಯದಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ನಡುವೆ ಪೈಪೋಟಿ ಏರ್ಪಡಬಹುದು. 5ಜಿ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ತಾವೇ ಮುಂಚೂಣಿಯಲ್ಲಿದ್ದೇವೆ ಎಂದು ಎರಡೂ ಕಂಪನಿಗಳು ಹೇಳಿಕೊಂಡಿವೆ. ಹರಾಜಿನ ಸಮಯದಲ್ಲಿ ಜಿಯೋ ದೊಡ್ಡ ಬಿಡ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಏರ್‌ಟೆಲ್ ಕೂಡ ಈ ಸ್ಪರ್ಧೆಯಲ್ಲಿ ಪೈಪೋಟಿ ನೀಡಲಿದೆ. ಇನ್ನು ಹರಾಜಿನ ಸಮಯದಲ್ಲಿ ವೊಡಾಫೋನ್-ಐಡಿಯಾ ಮತ್ತು ಅದಾನಿ ಎಂಟರ್‌ಪ್ರೈಸಸ್‌ನಿಂದ ಸೀಮಿತ ಬಿಡ್ಡಿಂಗ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಕೇವಲ ನಾಲ್ಕು ಕಂಪನಿಗಳು ಮಾತ್ರ ಇರುವುದರಿಂದ ಆಕ್ರಮಣಕಾರಿ ಬಿಡ್ಡಿಂಗ್ ಅಸಂಭವ ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ.