ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರ ಉಚಿತ ರೈಲು ಪ್ರಯಾಣದಿಂದ ಬೊಕ್ಕಸಕ್ಕೆ 62 ಕೋಟಿ ರೂ. ಹೊರೆ ಬಿದ್ದಿದೆ. ಇದರಲ್ಲಿ ಕರೊನಾ ಸಂಕ್ರಾಮಿಕ ಅವಧಿಯಲ್ಲಿ ಪ್ರಯಾಣಿಸಿದ ಬಿಲ್ 2.5 ಕೋಟಿ ರೂ. ಸೇರಿದೆ ಎಂದು ಆರ್ಟಿಐ ಕಾಯ್ದೆಯಡಿ ಬಹಿರಂಗಪಡಿಸಲಾದ ಮಾಹಿತಿ ತಿಳಿಸಿದೆ.

ಹಾಲಿ ಸಂಸದರು ರೈಲ್ವೆಯ ಪ್ರಥಮ ದರ್ಜೆ ಹವಾನಿಯಂತ್ರಿತ ಅಥವಾ ಎಕ್ಸಿಕ್ಯುಟಿವ್ ಕ್ಲಾಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ. ಅವರ ಸಂಗಾತಿಗಳು ಸಹ ಕೆಲವು ಷರತ್ತುಗಳ ಅಡಿಯಲ್ಲಿ ರೈಲುಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಮಾಜಿ ಸಂಸದರು ಸಹ ಎಸಿ-2 ಟಯರ್ನ ಯಾವುದೇ ರೈಲಿನಲ್ಲಿ ತಮ್ಮ ಸಂಗಾತಿಯೊಂದಿಗೆ ಅಥವಾ ಎಸಿ-1ನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ.
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಎಂಬುವರು ಸಲ್ಲಿಸಿದ ಮಾಹಿತಿ ಹಕ್ಕು ಪ್ರಶ್ನೆಗೆ ಉತ್ತರಿಸಿರುವ ಲೋಕಸಭೆಯ ಸಚಿವಾಲಯವು, 2017-2018ರಿಂದ 2021-22ರವರೆಗೆ ಹಾಲಿ ಸಂಸದರ ಪ್ರಯಾಣಕ್ಕಾಗಿ 35.21 ಕೋಟಿ ರೂಪಾಯಿ ಮತ್ತು ಮಾಜಿ ಸಂಸದರ ಪ್ರಯಾಣಕ್ಕೆ 26.82 ಕೋಟಿ ರೂ. ಬಿಲ್ ಅನ್ನು ರೈಲ್ವೆಯಿಂದ ಸ್ವೀಕರಿಸಲಾಗಿದೆ ಎಂದು ಹೇಳಿದೆ. 2020-21ರ ಕರೊನಾ ಸಾಂಕ್ರಾಮಿಕ ಅವಧಿಯಲ್ಲಿ ಹಾಲಿ ಮತ್ತು ಮಾಜಿ ಸಂಸದರು ರೈಲ್ವೆ ಪಾಸ್ ಗಳನ್ನು ಬಳಸಿದ್ದು, ಅದರ ಬಿಲ್ ಕ್ರಮವಾಗಿ 1.29 ಕೋಟಿ ಹಾಗೂ 1.18 ಕೋಟಿ ರೂ. ಆಗಿದೆ ಎಂದು ಸಚಿವಾಲಯ ತಿಳಿಸಿದೆ.