ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, ದೇಶದಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ನಿರ್ಮಿಸಿರುವ ಆಜಾದಿಉಪಗ್ರಹವು (AzaadiSAT) ಮುಂದಿನ ತಿಂಗಳ ಆರಂಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಣ್ಣ ಉಪಗ್ರಹ ಉಡಾವಣೆ ನೌಕೆ (ಎಸ್‌ಎಸ್‌ಎಲ್‌ವಿ) ಮೂಲಕ ಉಡಾವಣೆಗೆ ಸಿದ್ಧವಾಗಿದೆ.
ಎಂಟು ಕೆ.ಜಿ ತೂಕದ ಪ್ರಾಯೋಗಿಕ ಉಪಗ್ರಹವು ತನ್ನದೇ ಸೌರ ಫಲಕ ಮತ್ತು ದೀರ್ಘ ವ್ಯಾಪ್ತಿಯ ಸಂವಹನ ಟ್ರಾನ್ಸ್‌ಪಾಂಡರ್‌ಗಳ ಫೋಟೋ ತೆಗೆಯಲು ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಉಪಗ್ರಹವು 6 ತಿಂಗಳ ಕಾಲ ಜೀವಿತಾವಧಿ ಹೊಂದಿರಲಿದೆ.
'ಪ್ರಸಕ್ತ ವರ್ಷದ ವಿಶ್ವಸಂಸ್ಥೆಯ 'ಬಾಹ್ಯಾಕಾಶದಲ್ಲಿ ಮಹಿಳೆಯರು' ಎಂಬ ವಿಷಯದ ಆಧಾರದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಉದ್ದೇಶದ ಬಾಹ್ಯಾಕಾಶ ಯೋಜನೆಯ ಚೊಚ್ಚಲ ಕಾರ್ಯಾಚರಣೆ ಇದಾಗಿದೆ ಎಂದು ಮುಖ್ಯ ತಂತ್ರಜ್ಞಾನ ಅಧಿಕಾರಿ ರಿಫಾತ್ ಶಾರೂಕ್ ತಿಳಿಸಿದ್ದಾರೆ.