ತಿರುವನಂತಪುರ: ಅದೃಷ್ಟ ಎಂದರೆ ಹಾಗೆನೇ, ಯಾವಾಗ ಬೇಕಾದರೂ ಯಾವ ಸ್ವರೂಪದಲ್ಲಿ ಬೇಕಾದರೂ ಬರುತ್ತದೆ. ಅದಕ್ಕೆ ಈ ಘಟನೆಯೇ ಸಾಕ್ಷಿ. ಕೇರಳದ ಮಹಿಳೆಯೊಬ್ಬರು ಬೇರೆಯವರು ಆಯ್ಕೆ ಮಾಡಿ ಇಟ್ಟುಕೊಂಡಿದ್ದ ಲಾಟರಿಯಿಂದ 75 ಲಕ್ಷ ರೂಪಾಯಿ ಗಳಿಸಿದ್ದಾರೆ!
ಲಾಟರಿಯನ್ನು ಮುಟ್ಟದೆ, ಆಯ್ಕೆಯನ್ನೂ ಮಾಡದೇ ಜಾಕ್ಪಾಟ್ ಹೊಡೆದಿದ್ದಾರೆ ಈಕೆ.
ಸದ್ಯ ಕೇರಳದಲ್ಲಿ ಲಾಟರಿಗಳ ಮಹಾ ಹಬ್ಬ ನಡೆಯುತ್ತಿದೆ. ಇದಾಗಲೇ ಕೆಲವರು ಕೋಟ್ಯಧಿಪತಿಗಳು, ಲಕ್ಷಾಧಿಪತಿಗಳು ಆಗಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಅದೃಷ್ಟವನ್ನು ತಮ್ಮ ಕೈಯಾರೆ ಪರೀಕ್ಷೆ ಮಾಡಿಕೊಂಡವರು. ಆದರೆ ನರ್ಸ್ ಒಬ್ಬರು ಮಾತ್ರ ಲಾಟರಿಯನ್ನು ಆರಿಸಿಯೂ ಇಲ್ಲ, ಅದನ್ನು ನೋಡಲೂ ಇಲ್ಲ. ಆದರೂ ಇವರಿಗೆ ಹೊಡೆದಿದೆ ಒಂದಲ್ಲ, ಎರಡಲ್ಲ, ಬರೋಬ್ಬರಿ 75 ಲಕ್ಷ ರೂಪಾಯಿ!
ತೋಡುಪುಳ ಸಮೀಪದ ಕುಮಾರಮಂಗಲಂ ವಿಲೇಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆರೋಗ್ಯ ಶುಶ್ರೂಷಕಿ ಕೆ.ಜಿ.ಸಂಧ್ಯಾಮೋಳ್ ಇಂಥದ್ದೊಂದು ಭಾಗ್ಯಶಾಲಿ. ಆಗಿದ್ದೇನೆಂದರೆ, ಇವರಿಗೆ ಲಾಟರಿ ತೆಗೆಯುವ ಚಟ ಶುರುವಾದದ್ದು, ಸಂಧ್ಯಾ ಮೂರು ತಿಂಗಳ ಹಿಂದೆ ಮೂಪ್ಪಿಲ್ ಕಡವುನಲ್ಲಿರುವ ವೆಟ್ಟಿಕಾಡು ಲಕ್ಕಿ ಸೆಂಟರ್ ಎಂದು ಹೆಸರಿಸಲಾದ ಲಾಟರಿ ಕೇಂದ್ರಕ್ಕೆ ಬಂದಾಗ. ಇಲ್ಲಿಯ ಚಿಲ್ಲರೆ ಏಜೆಂಟ್ ಸಾಜನ್ ಥಾಮಸ್ ಅವರ ಪರಿಚಯವಾದಾಗ ಅವರು ಲಾಟರಿ ಟಿಕೆಟ್ ಖರೀದಿಸುವಂತೆ ಸಂಧ್ಯಾಮೋಳ್ ಅವರಿಗೆ ಹೇಳುತ್ತಿದ್ದರು. ಮೊದಮೊದಲು ಲಾಟರಿ ಖರೀದಿಸಿದರೂ ಸಂಧ್ಯಾಮೋಳ್ ಅವರಿಗೆ ಇದರ ಬಗ್ಗೆ ಆಸಕ್ತಿ ಇರಲಿಲ್ಲ.
ಸಾಜನ್ ಅವರು ತುಂಬಾ ಒತ್ತಾಯ ಮಾಡುತ್ತಾರೆ ಎನ್ನುವ ಕಾರಣಕ್ಕೆ, ಪ್ರತಿ ಬಾರಿಯೂ ತಮ್ಮ ಹೆಸರಿನ ಲಾಟರಿ ನೀವೇ ತೆಗೆದು ಇಡಿ, ನಾನು ಹಣವನ್ನು ಕೊಡುತ್ತೇನೆ ಎನ್ನುತ್ತಿದ್ದರು ಸಂಧ್ಯಾಮೋಳ್. ಅದರಂತೆ ಸಂಧ್ಯಾಮೋಳ್ ಅವರ ಹೆಸರಿನಲ್ಲಿ ಸಾಜನ್ ಅವರು ಟಿಕೆಟ್ ತೆಗೆದು ಇಡುತ್ತಿದ್ದರು.
ಹೀಗೆ ತೆಗೆದಿಟ್ಟ ಟಿಕೆಟ್ ಈ ಬಾರಿ ಮೊದಲ ಸ್ಥಾನ ಪಡೆದಿದೆ! ಇದನ್ನು ನೋಡಿ ಸಾಜನ್ ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಅವರು ಸಂಧ್ಯಾಮೋಳ್ ಅವರಿಗೆ ಕರೆ ಮಾಡಿ ಬಹುಮಾನದ ಬಗ್ಗೆ ಹೇಳಿದಾಗ ಮೊದಲಿಗೆ ಅದನ್ನು ಸಂಧ್ಯಾಮೋಳ್ ನಂಬಲೇ ಇಲ್ಲವಂತೆ. ಆದರೆ ಕೊನೆಗೆ ತಮಗೆ ಪ್ರಥಮ ಬಹುಮಾನ 75 ಲಕ್ಷ ರೂಪಾಯಿ ಒಲಿದಿರುವುದು ತಿಳಿದು ಬಂದಿದೆ.
ಟಿಕೆಟ್ ಆಯ್ಕೆ ಮಾಡದೇ, ನೋಡದೇ, ಅದನ್ನು ಮುಟ್ಟದೆಯೂ ಸಂಧ್ಯಾಮೋಳ್ ಅವರಿಗೆ ಅದೃಷ್ಟ ಮನೆಬಾಗಿಲಿಗೆ ಬಂದಿದೆ. ಈ ಟಿಕೆಟ್ ಅನ್ನು ಪ್ರಾಮಾಣಿಕವಾಗಿ ಸಂಧ್ಯಾಮೋಳ್ ಅವರಿಗೆ ನೀಡಿರುವ ಏಜೆಂಟ್ ಸಾಜನ್ ಅವರಿಗೂ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.