ನವದೆಹಲಿ: ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವರ ವಿರುದ್ಧ ಸುಪ್ರೀಂ ಪೀಠ ಮಾಡಿದ ಪ್ರತಿಕೂಲ ಹೇಳಿಕೆಗಳನ್ನು ಹಿಂಪಡೆಯುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾಕಾಲದ ಪೀಠ, ಪ್ರವಾದಿ ಮಹಮ್ಮದ್ ವಿರುದ್ಧದ ಹೇಳಿಕೆಗಾಗಿ ಶರ್ಮಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಅವರ "ಲೂಸ್ ಟಾಕ್" ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ" ಮತ್ತು ಈಗ ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ನೇರವಾಗಿ ಅವರೇ ಕಾರಣ ಎಂದು ಹೇಳಿದ್ದರು.
ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅಗ್ಗದ ಪ್ರಚಾರ, ರಾಜಕೀಯ ಅಜೆಂಡಾ ಅಥವಾ ಕೆಲವು ಕೆಟ್ಟ ಚಟುವಟಿಕೆಗಳಿಗಾಗಿ ಈ ರೀತಿ ಹೇಳಿಕೆ ನೀಡಲಾಗಿದೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಂತರ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದೆಹಲಿ ಮೂಲದ ಅಜಯ್ ಗೌತಮ್ ಅವರು ಪತ್ರದ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, "ನೂಪುರ್ ಶರ್ಮಾ ಅವರಿಗೆ ನ್ಯಾಯಯುತ ವಿಚಾರಣೆಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಅವರ ವಿರುದ್ಧದ ಟೀಕೆಗಳನ್ನು ತೆಗೆದುಹಾಕಲು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠಕ್ಕೆ ಸೂಕ್ತ ಆದೇಶ ಅಥವಾ ನಿರ್ದೇಶನಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನು ವಾಪಸ್ ಪಡೆಯಬೇಕು, ನ್ಯಾಯಮೂರ್ತಿ ಸೂರ್ಯ ಕಾಂತ್ ಟೀಕೆಗಳು ಅನವಶ್ಯಕ ಎಂದು ಘೋಷಿಸಬೇಕು. ನೂಪುರ್ ಶರ್ಮಾ ಅವರಿಗೆ ನ್ಯಾಯಯುತ ವಿಚಾರಣೆಗೆ ಅವಕಾಶ ಸಿಗಬೇಕೆಂಬ ದೃಷ್ಟಿಯಿಂದ ಈ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಮೌಖಿಕ ಅಭಿಪ್ರಾಯ ವಾಪಸ್ ಪಡೆಯಬೇಕು. ಜಸ್ಟೀಸ್ ಸೂರ್ಯಕಾಂತ್ ಅವರ ಹೇಳಿಕೆಗಳು ಅನಾವಶ್ಯಕವಾಗಿದ್ದವು" ಎಂದು ಸಾಮಾಜಿಕ ಕಾರ್ಯಕರ್ತ ಅಜಯ್ ಗೌತಮ್ ಅವರು ತಮ್ಮ ಪತ್ರದಲ್ಲಿ ವಾದಿಸಿದ್ದಾರೆ.