ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಪಕ್ಷಗಳು ಸಭೆ ನಡೆಸಿದ್ದು, ಲಂಕಾದ ಹಾಲಿ ಅಧ್ಯಕ್ಷ ಗೋಟಾಬಯಾ ರಾಜಪಕ್ಸ ರಾಜೀನಾಮೆ ನೀಡಿದ ಬಳಿಕ ಮಧ್ಯಂತರ ಸರ್ವಪಕ್ಷ ಸರ್ಕಾರ ರಚನೆಗೆ ನಿರ್ಧರಿಸಿವೆ.
ಲಂಕಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಯತ್ನದ ಭಾಗವಾಗಿ ಮಧ್ಯಂತರವಾಗಿ ಸರ್ವಪಕ್ಷಗಳನ್ನೊಳಗೊಂಡ ಸರ್ಕಾರ ರಚನೆಯ ಪ್ರಯತ್ನ ನಡೆಯುತ್ತಿದೆ.
ಬುಧವಾರದಂದು ಶ್ರೀಲಂಕಾ ಅಧ್ಯಕ್ಷರ ಹುದ್ದೆಗೆ ರಾಜಪಕ್ಸ ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ರೋಸಿಹೋಗಿರುವ ಜನತೆ, ಅಧ್ಯಕ್ಷ, ಪ್ರಧಾನಿಗಳ ಮನೆಗಳಿಗೆ ದಾಂಗುಡಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಜು.09 ರಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಮಧ್ಯಂತರವಾಗಿ ಎಲ್ಲಾ ಪಕ್ಷಗಳೂ ಒಗ್ಗೂಡಿ ಸರ್ಕಾರವೊಂದನ್ನು ರಚಿಸುವುದಕ್ಕೆ ನಾವು ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದು ಆಡಳಿತಾರೂಢ ಶ್ರೀಲಂಕಾದ ಪೊದುಜನ ಪೆರಮುನ ಪಕ್ಷದಿಂದ ಬೇರ್ಪಟ್ಟ ಗುಂಪಿನ ನಾಯಕ ವಿಮಲ್ ವೀರವನ್ಸ ಹೇಳಿದ್ದಾರೆ. ಮತ್ತೋರ್ವ ನಾಯಕ ಪ್ರತಿಕ್ರಿಯೆ ನೀಡಿದ್ದು, ನಾವು ರಾಜಪಕ್ಸ ರಾಜೀನಾಮೆಗಾಗಿ ಜು.13 ವರೆಗೂ ಕಾಯಬೇಕಿಲ್ಲ ಎಂದು ಹೇಳಿದ್ದಾರೆ.