ನವದೆಹಲಿ :ಕೇಂದ್ರ ಗೃಹ ಸಚಿವಾಲಯವು ಎನ್ಜಿಒಗಳ ವಾರ್ಷಿಕ ರಿಟರ್ನ್ಗಳ ಕುರಿತು ಡಾಟಾ ಮತ್ತು ಪರವಾನಿಗೆಗಳು ರದ್ದುಗೊಂಡಿರುವ ಎನ್ಜಿಒಗಳ ಪಟ್ಟಿ ಸೇರಿದಂತೆ ಕೆಲವು ಪ್ರಮುಖ ಮಾಹಿತಿಗಳನ್ನು ತನ್ನ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್‌ಎ) ವೆಬ್‌ಸೈಟ್‌ನಿಂದ ತೆಗೆದುಹಾಕಿದೆ.
ಮಾಹಿತಿಗಳನ್ನು ತೆಗೆದಿರುವುದಕ್ಕೆ ಕಾರಣವು ಸ್ಪಷ್ಟವಾಗಿಲ್ಲ. ಉಪಯೋಗಿಯಲ್ಲದ ಮತ್ತು ಅನಗತ್ಯವೆಂದು ಪರಿಗಣಿಸಲಾದ ಮಾಹಿತಿಗಳನ್ನು ತೆಗೆದುಕಹಾಕಲಾಗಿದೆ ಎಂದು ಬೆಳವಣಿಗೆಯನ್ನು ಬಲ್ಲ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಪರವಾನಿಗೆಗಳನ್ನು ಕಳೆದುಕೊಂಡಿರುವ ಎನ್ಜಿಒಗಳ ಸಂಖ್ಯೆ ಮತ್ತು ವಾರ್ಷಿಕ ರಿಟರ್ನ್ಗಳನ್ನು ಸಲ್ಲಿಸಿರುವ ಎನ್ಜಿಒಗಳ ಸಂಖ್ಯೆ ಕುರಿತು ಒಟ್ಟಾರೆ ಡಾಟಾವನ್ನು ಇದ್ದ ರೀತಿಯಲ್ಲಿಯೇ ಕಾಯ್ದುಕೊಳ್ಳಲಾಗಿದೆ ಎಂದರು.
ಈ ತಿಂಗಳ ಆರಂಭದಲ್ಲಿ ಗೃಹ ಸಚಿವಾಲಯವು ಪ್ರಕಟಿಸಿದ್ದ ಎಫ್ಸಿಆರ್‌ಎ ನಿಯಮಗಳಲ್ಲಿಯ ಬದಲಾವಣೆಗಳಿಗೆ ಅನುಗುಣವಾಗಿ ಮಾಹಿತಿಗಳನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಎನ್ಜಿಒಗಳ ಮೇಲಿನ ಪಾಲನಾ ಹೊರೆಯನ್ನು ಕಡಿಮೆ ಮಾಡಲು' ಗೃಹ ಸಚಿವಾಲಯವು ಜು.1ರಂದು ಎಫ್ಸಿಆರ್‌ಎದಲ್ಲಿ ಹಲವಾರು ಬದಲಾವಣೆಗಳನ್ನು ಪ್ರಕಟಿಸಿತ್ತು. ವಿದೇಶಿ ದೇಣಿಗೆಗಳ ಸ್ವೀಕೃತಿ ಘೋಷಣೆಯನ್ನು ನಿಯಂತ್ರಿಸುವ ನಿಯಮ 13ರಲ್ಲಿ ಬದಲಾವಣೆ ಇವುಗಳಲ್ಲಿ ಒಂದಾಗಿದೆ. 'ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ವ್ಯಕ್ತಿಯು ಅಂತಹ ದೇಣಿಗೆಗಳ ವಿವರಗಳನ್ನು ತ್ರೈಮಾಸಿಕದ ಕೊನೆಯ ದಿನಾಂಕದಿಂದ 15 ದಿನಗಳಲ್ಲಿ ಸಚಿವಾಲಯದ ಅಧಿಕೃತ ವೆಬ್ಸೈಟ್‌ನಲ್ಲಿ ಅಥವಾ ಕೇಂದ್ರ ಸರಕಾರವು ನಿರ್ದಿಷ್ಟ ಪಡಿಸಿದ ವೆಬ್ಸೈಟ್‌ನಲ್ಲಿ ಪೋಸ್ಟ್ ಮಾಡಬೇಕು ಮತ್ತು ಇವು ದಾನಿಗಳ ವಿವರಗಳು, ಸ್ವೀಕರಿಸಿದ ಹಣ ಮತ್ತು ಸ್ವೀಕೃತಿ ದಿನಾಂಕಗಳನ್ನು ಸ್ಪಷವಾಗಿ ಸೂಚಿಸಿರಬೇಕು' ಎಂದು ಹೇಳಲಾಗಿದ್ದ ನಿಯಮ 13ರ ಷರತ್ತು (ಬಿ) ಅನ್ನು ಕೈಬಿಡಲಾಗಿದೆ. ಆಗ ಹಲವಾರು ಎನ್ಜಿಒಗಳು ನಿಯಮಗಳಲ್ಲಿ ಬದಲಾವಣೆಯನ್ನು 'ವಿಚಿತ್ರ'ಎಂದು ಬಣ್ಣಿಸಿದ್ದವು. ತಿದ್ದುಪಡಿ ಮಾಡಲಾದ ನಿಯಮಗಳು ಎಫ್ಸಿ ಆರ್‌ಎ ವಿಭಾಗದ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ತಗ್ಗಿಸುತ್ತವೆ ಎಂದು ಕೆಲವು ಎನ್ಜಿಒಗಳು ಬೆಟ್ಟು ಮಾಡಿದ್ದವು.