ಕಾಸರಗೋಡು/ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ಅತಿವೃಷ್ಟಿಯಿಂದ ಹಾಗೂ ತಗ್ಗು ಪ್ರದೇಶದ ಜನರ ಸುರಕ್ಷತೆಗೆ ತಕ್ಷಣ ಕ್ರಮಕೈಗೊಳ್ಳಲು ತಾಲೂಕು ತಹಸೀಲ್ದಾರ್‍ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ತಾಲೂಕುಗಳಲ್ಲಿ 24 ಗಂಟೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಇದರ ಜವಾಬ್ದಾರಿಯನ್ನು ಕಿರಿಯ ಅಧೀಕ್ಷಕರು ಹಾಗೂ ಉಪ ತಹಸೀಲ್ದಾರ್‍ಗಳಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ತಿಳಿಸಿದರು.
ಇದೇ ವೇಳೆ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಹಲವೆಡೆ ಪಯಸ್ವಿನಿ, ತೇಜಸ್ವಿನಿ,ಸೀರೆ, ಚೈತ್ರವಾಹಿನಿ ನದಿಗಳು ಉಕ್ಕಿ ಹರಿಯುತ್ತಿವೆ. ಕೊನ್ನಕ್ಕಾಡ್ ಅಶೋಕಚ್ಚಾಲ್-ಚೆಮ್ಮಟ್ಟಂಚಾಲ್ ಸೇತುವೆ ಜಲಾವೃತಗೊಂಡಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ವೃತ್ತಿಪರ ಕಾಲೇಜು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಗಾಳಿ ಮಳೆಗೆ ಮನೆಗಳಿಗೆ ಹಾನಿಯಾಗಿದೆ. ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಕಠಿಣ ನಿರ್ದೇಶನ ನೀಡಲಾಗಿದೆ.
ಮಧೂರು ದೇವಾಲಯ, ಕುಂಬಳೆ ರೈಲ್ವೇ ನಿಲ್ಧಾಣದೊಳಗೆ ನೆರೆ ನೀರು ಹೊಕ್ಕಿದೆ. ಉಪ್ಪಳ ಪತ್ವಾಡಿಯಲ್ಲಿ ಗ್ರಾ.ಪಂ. ಮಾಜಿ ಸದಸ್ಯೆ ತಾಹಿರಾ ಎಂಬವರ ಮನೆ ಭಾಗಶಃ ಜಲಾವೃತಗೊಂಡಿದೆ. ಉಪ್ಪಳ, ಕೈಯ್ಯಾರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಅಂತರ್ ರಾಜ್ಯ ರಸ್ತೆ ಸಾರಡ್ಕದಲ್ಲಿ ರಸ್ತೆಗೆ ಮಣ್ಣು ಕುಸಿದು ರಸ್ತೆ ಸಂಚಾರ ನಿಂತಿದೆ.
ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ ಪೆರ್ಲ ಸನಿದ ಸ್ವರ್ಗ ರಸ್ತೆಯ ಕೋಟೆ ಹಾಗೂ ಅಡ್ಕಸ್ಥಖಳ ಗಡಿ ಸಮೀಪ ಸಾರಡ್ಕದಲ್ಲಿ ಭಾರಿ ಭೂಕುಸಿತದಿಂದ ತಾಸುಗಳ ಕಾಲ ಪುತ್ತೂರು ಭಾಗಕ್ಕೆ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಯಿತು.
ಸಾರಡ್ಕದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದು, ರಸ್ತೆ ಮಧ್ಯೆ ಉಂಟಾದ ಹೊಂಡದ ಮೂಲಕ ನೀರು ತುಂಬಿಕೊಳ್ಳುತ್ತಿರುವುದು ರಸ್ತೆಗೆ ಮತ್ತಷ್ಟು ಅಪಾಯ ಉಂಟಾಗುವ ಭೀತಿ ಎದುರಾಗಿತ್ತು. ಪೆರ್ಲದಿಂದ ಸ್ವರ್ಗ ಸಂಚರಿಸುವ ರಸ್ತೆ ಕನ್ನಟಿಕಾನ ಸನಿಹದ ಕೋಟೆ ಎಂಬಲ್ಲಿ ಭೂಕುಸಿತವುಂಟಾಗಿದ್ದು, ತಾಸುಗಳ ಕಾರ್ಯಾಚರಣೆ ನಡೆಸಿ, ಮಣ್ಣು ತೆರವುಗೊಳಿಸಲಾಗಿತ್ತು. ಇದರಿಂದ ಪಾಣಾಜೆ ಮೂಲಕ ಪುತ್ತೂರು ಹಾಗೂ ಅಡ್ಕಸ್ಥಳ ಮೂಲಕ ವಿಟ್ಲ-ಪುತ್ತೂರು ನಡುವಿನ ಸಂಪರ್ಕ ತಾಸುಗಳ ಕಾಲ ಕಡಿದುಕೊಂಡಿತ್ತು. ಇನ್ನೊಂದೆಡೆ ರಸ್ತೆಗೆ ಭಾರಿ ಪ್ರಮಾಣದಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಸಂದರ್ಭ ತೋಡಿಗೆ ಸುರಿದಿರುವುದಾಗಿಯೂ ಸ್ಥಳೀಯರು ದೂರಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕಾಸರಗೋಡು ಕರಂದಕ್ಕಾಡಿನಲ್ಲಿ ರಸ್ತೆಕಾಮಗಾರಿ ಸಂಪೂರ್ಣ ಅಯೋಮಯವಾಘಿದೆ. ಇಲ್ಲಿ ಮಳೆನೀರು ಹರಿಯುವ ಚರಂಡಿ ಸಂಪೂರ್ಣ ಮುಚ್ಚಿಕೊಂಡಿದ್ದು, ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
ಕುಂಬಳೆ ಪೇಟೆಯ ರೈಲ್ವೆ ನಿಲ್ದಾಣ ವಠಾರ ಸಂಪೂರ್ಣ ಜಲಾವೃತಗೊಂಡಿದೆ. ಪೇಟೆಯ ಮಳೆನೀರು ಹರಿದು ರೈಲ್ವೆ ನಿಲ್ದಾಣದೊಳಗೆ ತುಂಬಿಕೊಂಡಿದೆ. ಅವೈಜ್ಞಾನಿಕ ಚರಂಡಿ ವಯವಸ್ಥೆಯಿಂದ ಪ್ರತಿವರ್ಷ ಕುಂಬಳೆ ರೈಲ್ವೆ ನಿಲ್ದಾಣ ಜಲಾವೃತಗೊಳ್ಳಲು ಕಾರಣವಾಗುತ್ತಿದೆ. ಬಿರುಸಿನಿಂದ ಕೂಡಿದ ಮಳೆ ಮುಂದುವರಿದಿದ್ದು, ಮತ್ತಷ್ಟು ಅನಾಹುತಗಳುಂಟಾಗುವ ಭೀತಿ ಎದುರಾಗಿದೆ.
ಉಕ್ಕಿ ಹರಿದ ಮಧುವಾಹಿನಿ, ಮಧೂರು ಕ್ಷೇತ್ರದೊಳಗೆ ನುಗ್ಗಿದ ನೀರು
ಮಧೂರು ಮಧುವಾಹಿನಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದೊಳಗೆ ನೀರು ನುಗ್ಗಿದೆ. ದೇಗುಲದ ಹೊರ ಹಾಗೂ ಒಳಾಂಗಣದೊಳಗೆ ನೀರು ತುಂಬಿಕೊಂಡಿದ್ದು, ಭಕ್ತಾದಿಗಳು ನೀರಿನಲ್ಲಿ ಸಂಚರಿಸಿ ಶ್ರೀದೇವರ ದರ್ಶನ ಪಡೆದರು. ರಾತ್ರಿ ನಿರಂತರ ಮಳೆಯಾದಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ನಾಲ್ಕು ಮನೆಗಳು ಕುಸಿತ:
ಕಳೆದ ಕೆಲವು ದಿವಸಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ಹೊಸದುರ್ಗ ತಾಲೂಕಿನಲ್ಲಿ 4 ಮನೆಗಳು ಭಾಗಶಃ ಕುಸಿದಿವೆ. ಮಡಿಕೈ ಗ್ರಾಮದ PಕುಞÂರಾಮನ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಭಾರೀ ಮಳೆ ಮತ್ತು ಗಾಳಿಗೆ ಕ್ಲಾಯಿಕ್ಕೋಡ್ ಗ್ರಾಮದ ಪಿ.ಗೋಪಿ, ಪಡನ್ನ ಐತ್ತಲ ನಿವಾಸಿ ಸಂಗೀತಾ, ನೀಲೇಶ್ವರ ಗ್ರಾಮದ ಅಮ್ಮಾಳು ಅವರ ಮನೆಗಳಿಗೆ ಹಾನಿಯುಂಟಾಗಿದೆ. ಪಡನ್ನದಲ್ಲಿ ಸಂಗೀತಾ ಅವರ ಹಾನಿಗೊಳಗಾದ ಮನೆಗೆ ಅಂದಾಜು 50,000 ರೂ. ಗೋಪಿ ಅವರ ಮನೆಗೆ 10 ಸಾವಿರ ರೂ., ಇತರೆ ಮನೆಗಳಿಗೆ 15 ಸಾವಿರ ರೂ.ನಷ್ಟ ಅಂದಾಜಿಸಲಾಗಿದೆ.