ನವದೆಹಲಿ: ಶ್ರೀಲಂಕಾದಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ ಹಾಗೂ ಬಿಕ್ಕಟನ್ನು ಎದುರಿಸುತ್ತಿರುವ ಅಲ್ಲಿನ ಜನರೊಂದಿಗೆ ಭಾರತ ಇದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಹೊರಡಿಸಿದ ಪ್ರಕಟಣೆಯಲ್ಲಿ, “ಶ್ರೀಲಂಕಾ ಭಾರತದ ಅತ್ಯಂತ ನಿಕಟ ನೆರೆಯ ರಾಷ್ಟ್ರವಾಗಿದೆ. ಎರಡೂ ದೇಶಗಳ ನಾಗರಿಕರು ಗಾಢವಾದ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದಾರೆ. ಶ್ರೀಲಂಕಾದ ಜನರು ಈ ಕಷ್ಟದ ಸಮಯದಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ನಾವು ಅವರೊಂದಿಗೆ ನಿಲ್ಲುತ್ತೇವೆ” ಎಂದು ತಿಳಿಸಿದೆ.
“ನಮ್ಮ ‘ನೆರೆಹೊರೆ ಮೊದಲು’ ನೀತಿಯಲ್ಲಿ ಶ್ರೀಲಂಕಾ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕಾಗಿಯೇ ಈ ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು $3.8 ಶತಕೋಟಿಗಿಂತ ಹೆಚ್ಚಿನ ಸಹಾಯವನ್ನು ಶ್ರೀಲಂಕಾಕ್ಕೆ ನೀಡಿದ್ದೇವೆ” ಎಂದು ಹೇಳಿದೆ.
ಶ್ರೀಲಂಕಾದಲ್ಲಿನ ಇತ್ತೀಚಿನ ಬದಲಾವಣೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ನಿರ್ದಿಷ್ಟ ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಸಹಾಯದಿಂದ ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಬಯಸುತ್ತಿರುವ ಶ್ರೀಲಂಕಾದ ಜನರೊಂದಿಗೆ ಭಾರತವು ಈ ಕಷ್ಟದ ಸಮಯದಲ್ಲಿ ಅವರೊಂದಿಗಿರುತ್ತದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಸರ್ಕಾರದ ವಿರುದ್ಧ ಜನರ ಆಕ್ರೋಶ ಸ್ಫೋಟಿಸಿದೆ. ಸಾವಿರಾರು ಜನರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಗೋಡೆಗಳನ್ನು ಜಿಗಿದು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸವನ್ನು ಪ್ರವೇಶಿಸಿದ್ದರು. ಜನರ ಈ ಆಕ್ರೋಶಕ್ಕೆ ಬೆದರಿರುವ ಅಧ್ಯಕ್ಷ ರಾಜಪಕ್ಸೆ ಅವರು ಜುಲೈ 13 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲೋಕಸಭೆ ಸ್ಪೀಕರ್‌ಗೆ ತಿಳಿಸಿದ್ದಾರೆ.