HEALTH TIPS

ಅಪೆಂಡಿಸೈಟಿಸ್‍ ಉಂಟಾಗಲು ಕಾರಣವೇನು? ಚಿಕಿತ್ಸೆ ಹೇಗೆ?

              ಅಪೆಂಡಿಸೈಟಿಸ್ ಅಥವಾ, ಅಪೆಂಡಿಕ್ಸ್ ನ ಉರಿಯೂತ ಹದಿಹರೆಯ ಮಧ್ಯವಯಸ್ಕರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ನಾವೆಲ್ಲ ಈ ಸಮಸ್ಯೆಯನ್ನು ತಪ್ಪಾಗಿ 'ಅಪೆಂಡಿಕ್ಸ್' ರೋಗವೆಂದು ಕರೆಯುತ್ತೇವೆ. ಅಪೆಂಡಿಕ್ಸ್ ದೇಹದ ಅಂಗಾಂಗವಾಗಿದೆ. ಈ ಆರೋಗ್ಯ ಸಮಸ್ಯೆಯನ್ನು ಸುಮಾರು ಎರಡು ಶತಮಾನಗಳ ಮೊದಲೇ ವಿವರಿಸಲಾಗಿತ್ತು. ಪ್ರತಿ ವ್ಯಕ್ತಿಯು ತನ್ನ ಜೀವಮಾನದುದ್ದಕ್ಕೂ ಸಮಸ್ಯೆಯನ್ನು ಅನುಭವಿಸಬಹುದಾದ ಅಪಾಯವೆದುರಿಸುತ್ತಾನೆ. ಅಪೆಂಡಿಕ್ಸ್ ಗೆ ಸಂಬಂಧಿಸಿದ ಈ ಕಾಯಿಲೆಗೆ ಪರಿಹಾರವಿದೆ, ಆದರೆ ಈ ಕಾಯಿಲೆ ನಮ್ಮ ನಿರ್ಲಕ್ಷ್ಯದಿಂದ ಜಾಸ್ತಿಯಾಗುತ್ತದೆ.

                    ಅಪೆಂಡಿಸೈಟಿಸ್‍ ನೋವು ಎಲ್ಲಿ ಕಾಣಿಸಿಕೊಳ್ಳುತ್ತದೆ?

             ಹೊಟ್ಟೆಯ ಬಲಭಾಗದ ಕೆಳಮೂಲೆಯಲ್ಲಿ ಇದರ ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೊಡನೆ ವಾಕರಿಕೆ, ವಾಂತಿ, ಹೊಕ್ಕಳ ಭಾಗದ ಸುತ್ತ ಹಿಂಡಿದಂತಹ ಯಾತನೆಯು ಕೂಡ ಅಪೆಂಡಿಸೈಟಿಸ್‍ನ ಗುಣಲಕ್ಷಣಗಳಾಗಿರಬಹುದು, ಜ್ವರ, ಹೊಟ್ಟೆ ಒತ್ತುವುದರಿಂದ ಉಲ್ಬಣಗೊಳ್ಳುವ ನೋವು, ಹೊಟ್ಟೆಯ ಸ್ನಾಯುಗಳ ಬಿಗಿತವು ರೋಗಿಯ ಪರೀಕ್ಷೆಯಲ್ಲಿ ಕಾಣಸಿಗುವ ಗುಣ ಲಕ್ಷಣಗಳಾಗಿವೆ. ಅಪೆಂಡಿಕ್ಸ್ ಎಂಬ ಕೊಳವೆಯಾಕಾರದ ಪುಟ್ಟ ಅಂಗಾಂಗ ಹೊಟ್ಟೆಯ ಬಲ ಕೆಳಮೂಲೆಯಲ್ಲಿದೆ. ಸುಮಾರು 10 ಸೆಂಟಿಮೀಟರ್ ಉದ್ದವಿರುವ ಈ ಅಂಗ ಜಂತು ಹುಳುವಿನಂತೆ ಭಾಸವಾಗುವುದರಿಂದ ಅದಕ್ಕೆ ವರ್ಮಿ ಫಾರ್ಮ್ (ಗಿeಡಿmiಜಿoಡಿm) ಅಪೆಂಡಿಕ್ಸ್ ಎಂದು ಕರೆಯಲಾಗುತ್ತದೆ. ಈ ಅಂಗದಿಂದ ಮಾನವನಿಗೆ ಏನು ಉಪಯೋಗವೆನ್ನುವುದು ಇದುವರೆಗೆ ತಿಳಿದಿಲ್ಲ. ಅದರೆ ಕರುಳಿನ ಭಾಗದೊಂದಿಗೆ ಕೂಡಿರುವ ಇದಕ್ಕೆ ಅವುಗಳಂತೆ ರಕ್ತನಾಳಗಳಿವೆ. ಅಪೆಂಡಿಕ್ಸ್ ನಲ್ಲಿ ದುಗ್ಧರಸದ ಕಣಗಳು ಹೆಚ್ಚಿವೆ. ಆದರೆ ಅಪೆಂಡಿಕ್ಸ್ ಹೊರತೆಗೆಯುವುದರಿಂದ ದೇಹದ ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸ ಉಂಟಾದ ಕುರಿತು ವರದಿಗಳಿಲ್ಲ. 

                          ಅಪೆಂಡಿಸೈಟಿಸ್‍ ಉಂಟಾಗಲು ಕಾರಣವೇನು?

              ಅಪೆಂಡಿಕ್ಸ್ ಉರಿಯೂತವನ್ನು ನಾವು ಅಪೆಂಡಿಸೈಟಿಸ್ ಎನ್ನುತ್ತೇವೆ. ಅಪೆಂಡಿಸೈಟಿಸ್‍ಗೆ ಪ್ರಮುಖ ಕಾರಣವೇನೆಂಬುದು ತಿಳಿದಿಲ್ಲ. ಆದರೆ ನಾರಿನಾಂಶ ಸೇವನೆಯಿಂದ ಇದರ ಸಾಧ್ಯತೆ ಕುಂಠಿತಗೊಳ್ಳುತ್ತದೆ. ಮಲಬದ್ಧತೆ ಅಪೆಂಡಿಸೈಟಿಸ್‍ಗೆ ಕಾರಣವಾಗಬಲ್ಲದು. ಅಪೆಂಡಿಕ್ಸ್ ಎಂಬ ಕೊಳವೆಯೊಳಗೆ ಗಟ್ಟಿಯಾದ ಮಲದ ತುಣುಕು ಸೇರಿದಾಗ ಅಥವಾ ಜಂತುಹುಳಗಳಿಂದ ಈ ಕೊಳವೆಯ ಮುಖ ಭಾಗ ಮುಚ್ಚಲ್ಪಟ್ಟು ಅಡಚಣೆಯಾದಾಗ ಇಲ್ಲವೆ ಭಾಗದಲ್ಲಿ ಮಲದ ಶೇಖರಣೆಯಿಂದಾಗಿ ಸೋಂಕು ಅಥವಾ ಬ್ಯಾಕ್ಟಿರಿಯಾಗಳ ಸಂಖ್ಯೆ ಹೆಚ್ಚಿದಾಗ ದುಗ್ಧರಸ ಕಣಗಳ ಕಾರ್ಯ ಚಟುವಟಿಕೆಯ ಫಲವಾಗಿ ಅಂಗ ಊದಿಕೊಳ್ಳುತ್ತದೆ, ಉರಿಯೂತದ ಪ್ರಮುಖ ಗುಣಲಕ್ಷಣಗಳಾದ ನೋವು, ಕೆಂಪಾಗುವಿಕೆ, ಊತ ಮತ್ತು ತಾಪ ಹೆಚ್ಚಳ ಕಾಣಿಸಿಕೊಳ್ಳುತ್ತವೆ. ಅಧಿಕಗೊಂಡಲ್ಲಿ ಈ ಅಂಗದ ರಕ್ತ ಸಂಚಲನೆ ಸ್ಥಗಿತಗೊಳ್ಳುತ್ತದೆ. ಆಗ ಅಪೆಂಡಿಕ್ಸ್ ಕೊಳೆಯಲಾರಂಭಿಸುತ್ತದೆ. 

             ಕೊಳೆತ ಅಪೆಂಡಿಕ್ಸ್ ಒಡೆದು ಅದರಲ್ಲಿರುವ ಮಲ ಕೀವು-ರೋಗಾಣು ಇತ್ಯಾದಿಗಳು ಹೊಟ್ಟೆ ಸೇರುತ್ತವೆ. ಇದು 'ಪೆರಿಟೋನೈಟಿಸ್' (ಹೊಟ್ಟೆಯ ಹೊರಪದರದ ಉರಿಯೂತ) ಗೆ ಕಾರಣವಾಗುತ್ತದೆ. ರೋಗ ಉಲ್ಬಣ ತಡೆ ಹಾಗೂ ಸೋಂಕು ಹರಡದಂತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರುಳುಗಳು ಬಂದು ಅಪೆಂಡಿಕ್ಸ್ ನ ಛೇದಕ್ಕೆ ಅಂಟಿಕೊಂಡು ಕೀವು ಗಡ್ಡೆಗೆ (ಂಠಿಠಿeಟಿಜiಛಿuಟಚಿಡಿ ಂbsಛಿess ಅಥವಾ ಐumಠಿ) ಕಾರಣವಾಗುತ್ತವೆ. ಅಪೆಂಡಿಕ್ಸ್ ನಿಂದ ಹೊರಬಂದ ಕೀವು ಸೋಯಾಸ್ (Psoಚಿs) ಸ್ನಾಯುವಿನ ಸುತ್ತ ಹರಡಿದಾಗ ಅದು ಸ್ನಾಯುವನ್ನು ಕೆರಳಿಸುತ್ತದೆ. 

                                     ಅಪೆಂಡಿಕ್ಸ್ ಗೆ ಚಿಕಿತ್ಸೆ

                 ಅಪೆಂಡಿಕ್ಸ್ ಉರಿಯೂತದ ಗುಣಲಕ್ಷಣಗಳು ಇತರೆ ರೋಗಗಳಲ್ಲೂ ಕಾಣಿಸಿಕೊಳ್ಳಬಹುದು. ಹಾಗಾಗಿ ಹೊಟ್ಟೆಯ ಬಲಭಾಗದ ನೋವುಗಳೆಲ್ಲವೂ ಅಪೆಂಡಿಕ್ಸ್ ನ ಉರಿಯೂತವೇ ಆಗಿರಬೇಕೆಂದೇನಿಲ್ಲ. ಅಪೆಂಡಿಕ್ಸ್ ನಲ್ಲಿ ಟ್ಯೂಮರ್ ಅಥವಾ ಕ್ಯಾನ್ಸರ್ ಗಡ್ಡೆಗಳು ಕಾಣಿಸಿಕೊಳ್ಳಬಲ್ಲವು. ಕರುಳಿನ ಅಡೆತಡೆ, ಹೆಣ್ಣು ಮಕ್ಕಳಲ್ಲಿ ಅಂಡಾಶಯ ಸಂಬಂಧಿ ತೊಂದರೆ ಇತ್ಯಾದಿಗಳಲ್ಲೂ ಸಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು ತೀವ್ರವಾಗಿದ್ದಾಗ ಪದೇ ಪದೇ ನೋವು ನಿವಾರಕ ಆ್ಯಂಟಿಬಯೋಟಿಕ್ ಸ್ವಯಂ ಸೇವಿಸುತ್ತಾ ಕಾಲಹರಣ ಮಾಡುವುದರಲ್ಲಿ ಪ್ರಯೋಜನವಿಲ್ಲ. ಅಪೆಂಡಿಕ್ಸ್ ಉರಿಯೂತ ಖಚಿತಗೊಂಡಲ್ಲಿ ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಇಂದು ಲ್ಯಾಪರೋಸ್ಕೋಪಿಕ್ ತಂತ್ರಜ್ಞಾನ ಬಳಸಿಯೂ ಮಾಡಲಾಗುತ್ತದೆ. ಆದರೆ ಕೀವು ಗಡ್ಡೆಯುಂಟಾಗಿ ಕರುಳುಗಳು, ಅಪೆಂಡಿಕ್ಸ್, ಬಹು ಸಂಕೀರ್ಣವಾಗಿ ಅಂಟಿಕೊಂಡಿದ್ದಲ್ಲಿ ತೆರೆದ ಶಸ್ತ್ರಚಿಕಿತ್ಸೆ (ಔಠಿeಟಿ Suಡಿgeಡಿಥಿ) ಮಾಡಬೇಕಾದುದು ಅನಿವಾರ್ಯವಾಗಬಹುದು. ವೈದ್ಯರು ಶಸ್ತ್ರಕ್ರಿಯೆಗೆ ಮೊದಲು, ರಕ್ತ-ಮೂತ್ರ ಪರೀಕ್ಷಿಸಿ ಹೊಟ್ಟೆಯ ಅಲ್ಟ್ರಾಸೋನೋಗ್ರಫಿ, ಎಕ್ಸ್-ರೇ, ಸಿ-ಟಿ ಸ್ಕ್ಯಾನ್‍ ಸಹ ಮಾಡಬಹುದು. ಈ ಪರೀಕ್ಷೆಗಳು ರೋಗ ಹಾಗೂ ಆರೋಗ್ಯ ಸ್ಥಿತಿಯನ್ನು ಅರಿಯಲು, ಖಾತ್ರಿಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ. ಮಹಿಳೆಯರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಾಗ ಗರ್ಭಧಾರಣೆಯ ಪರೀಕ್ಷೆಯನ್ನು ಸಹ ಮಾಡಲಾಗುತ್ತದೆ. ಏಕೆಂದರೆ ಕೆಲವೊಮ್ಮೆ ರೋಗಿಯು ಅಪಸ್ಥಾನೀಯ ಗರ್ಭಧಾರಣೆಯಿಂದಲೂ ಕೂಡ ಅಪೆಂಡಿಸೈಟಿಸ್‍ ಅನ್ನು ಹೋಲುವ ನೋವು ಅನುಭವಿಸಬಹುದು.

                ಸರ್ಜರಿಯ ಮೂಲಕ ಅಪೆಂಡಿಕ್ಸ್ ಹೊರತೆಗೆದ ನಂತರ ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ರೋಗಿಯು ಚೇತರಿಸಿಕೊಳ್ಳುತ್ತಾನೆ. ಲ್ಯಾಪರೋಸ್ಕೋಪಿಕ್ ಸರ್ಜರಿಯಲ್ಲಿ ರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ. 

             ಅಪೆಂಡಿಕ್ಸ್ ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಸಣ್ಣ-ಪುಟ್ಟ ನಗರಗಳಲ್ಲೂ ಮಾಡಲಾಗುತ್ತದೆ. ಅಪೆಂಡಿಸೈಟಿಸ್‍ ನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದಲ್ಲಿ ಹೆಚ್ಚಿನ ಅಪಾಯ ತಪ್ಪಿಸಬಹುದಾಗಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
  1. ಸಮರಸ ಸುದ್ದಿ ಈಗ ಸದ್ಯಕ್ಕೆ ಇರುವ ಇತರ ಆನ್ಲೈನ್ ಸುದ್ದಿಗಳಿಗಿಂತ ಬಹಳ ಉತ್ತಮವಾಗಿ ಮೂಡಿ ಬರುತ್ತಿವೆ. ಸ್ಥಳೀಯ , ರಾಷ್ಟೀಯ , ಅಂತರಾಷ್ಟ್ರೀಯ ವಿದ್ಯಮಾನ, ಕ್ರೀಡೆ, ಸಾಹಿತ್ಯ, ಆರೋಗ್ಯ ಸಲಹೆ ಇತ್ಯಾದಿಗಳು ಅಕ್ಷರ ತಪ್ಪಿಲ್ಲದೆ ಬಹಳ ಚೆನ್ನಾಗಿ ಪ್ರಸಾರವಾಗುತ್ತಿದೆ..
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries