ನವದೆಹಲಿ: ಷಹಜಹಾನ್ ತಾಜ್ ಮಹಲ್ ನಿರ್ಮಿಸದಿದ್ದರೆ ದೇಶದಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 40 ರೂ. ಆಗಿರುತ್ತಿತ್ತು ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದೇಶದ ಎಲ್ಲಾ ಸಮಸ್ಯೆಗಳಿಗೆ ಆಡಳಿತ ಪಕ್ಷ ಮೊಘಲರು ಮತ್ತು ಮುಸ್ಲಿಮರನ್ನು ದೂಷಿಸುತ್ತಿದೆ ಎಂದು ಆರೋಪಿಸಿದ ಓವೈಸಿ, “ದೇಶದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಹಣದುಬ್ಬರ ಹೆಚ್ಚಾಗುತ್ತಿದೆ, ಡೀಸೆಲ್ ಲೀಟರ್‌ಗೆ 102 ರೂ.ಗೆ ಮಾರಾಟವಾಗುತ್ತಿದೆ, ನಿಜವಾಗಿ ಔರಂಗಜೇಬ್ ಇದೆಲ್ಲದಕ್ಕೂ ಹೊಣೆ, ಮೋದಿಯಲ್ಲ. ಉದ್ಯೋಗವಿಲ್ಲದಿರುವುದಕ್ಕೆ ಚಕ್ರವರ್ತಿ ಅಕ್ಬರ್ ಕಾರಣ, ಪೆಟ್ರೋಲ್ ಲೀಟರ್‌ಗೆ 104 ರೂ. 115 ರೂ.ಗೆ ಮಾರಾಟವಾಗುತ್ತಿದೆ, ಇದಕ್ಕೆ ತಾಜ್ ಮಹಲ್ ನಿರ್ಮಿಸಿದವನೇ ಹೊಣೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಶಹಜಹಾನ್ ಅವರು ತಾಜ್ ಮಹಲ್ ಅನ್ನು ಕಟ್ಟಿಸದಿದ್ದರೆ ಇಂದು ಪೆಟ್ರೋಲ್ 40 ರೂ.ಗೆ ಮಾರಾಟವಾಗುತ್ತಿತ್ತು. ಮಿಸ್ಟರ್ ಪ್ರಧಾನಿ… ಹೌದು. ಶಹಜಹಾನ್ ಅವರು ತಾಜ್ ಮಹಲ್ ಮತ್ತು ಕೆಂಪು ಕೋಟೆಯನ್ನು ನಿರ್ಮಿಸುವ ಮೂಲಕ ತಪ್ಪು ಮಾಡಿದ್ದಾರೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ಆ ಹಣವನ್ನು ಉಳಿಸಿ 2014 ರಲ್ಲಿ ಮೋದಿಗೆ ಹಸ್ತಾಂತರಿಸಬೇಕಿತ್ತು. ಪ್ರತಿಯೊಂದು ವಿಷಯದಲ್ಲೂ ಮೋದಿ ಮುಸ್ಲಿಮರು ಜವಾಬ್ದಾರರು, ಮೊಘಲರು ಜವಾಬ್ದಾರರು ಎಂದು ಹೇಳುತ್ತಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತಮ್ಮ ಭಾಷಣದಲ್ಲಿ ಹೇಳಿದ್ದು, ಅದರ ವೀಡಿಯೊವನ್ನು ಅವರ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಭಾರತವನ್ನು ಮೊಘಲರು ಮಾತ್ರ ಆಳುತ್ತಿದ್ದರೇ? ಅಶೋಕ್ ಆಳಲಿಲ್ಲವೇ? ಚಂದ್ರಗುಪ್ತ ಮೌರ್ಯ ಆಳಲಿಲ್ಲವೇ? ಆದರೆ ಬಿಜೆಪಿ ಮೊಘಲರನ್ನು ಮಾತ್ರ ನೋಡುತ್ತಿದೆ. ಅವರು ಒಂದು ಕಣ್ಣಿನಲ್ಲಿ ಮೊಘಲರನ್ನು ನೋಡುತ್ತಾರೆ, ಇನ್ನೊಂದು ಕಣ್ಣಿನಲ್ಲಿ ಪಾಕಿಸ್ತಾನವನ್ನು ನೋಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಭಾರತದ ಮುಸ್ಲಿಮರಿಗೂ ಮೊಘಲರಿಗೂ ಅಥವಾ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಓವೈಸಿ ಹೇಳಿದ್ದಾರೆ. “ನಾವು (ಮಹಮ್ಮದ್ ಅಲಿ) ಜಿನ್ನಾ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಮತ್ತು ಈ ವರ್ಷ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತೇವೆ. ನಮ್ಮ ಪೂರ್ವಜರು ಜಿನ್ನಾ ಅವರ ಪ್ರಸ್ತಾಪವನ್ನು ತಿರಸ್ಕರಿಸಿ ಭಾರತದಲ್ಲಿ ಉಳಿದುಕೊಂಡಿದ್ದಾರೆ ಎಂಬುದಕ್ಕೆ ಈ ದೇಶದ 20 ಕೋಟಿ ಮುಸ್ಲಿಮರು ಸಾಕ್ಷಿಯಾಗಿದ್ದಾರೆ” ಎಂದು ಓವೈಸಿ ಹೇಳಿದರು.
“ಭಾರತ ನಮ್ಮ ಪ್ರೀತಿಯ ದೇಶ. ನಾವು ಭಾರತವನ್ನು ತೊರೆಯುವುದಿಲ್ಲ. ನೀವು ಎಷ್ಟೇ ಘೋಷಣೆಗಳನ್ನು ಕೂಗಿದರೂ ನಾವು ಭಾರತವನ್ನು ತೊರೆಯುವುದಿಲ್ಲ. ನಾವು ಇಲ್ಲಿಯೇ ಬದುಕುತ್ತೇವೆ ಮತ್ತು ಇಲ್ಲಿಯೇ ಸಾಯುತ್ತೇವೆ” ಎಂದು ಓವೈಸಿ ತಿಳಿಸಿದರು.