ಪ್ರಯಾಗ್ರಾಜ್: ಇಲ್ಲಿನ ಡಾ. ಭೀಮರಾವ್ ಅಂಬೇಡ್ಕರ್ ಭವನದಲ್ಲಿರುವ ಅಟಾರ್ನಿ ಜನರಲ್ ಕಚೇರಿಯಲ್ಲಿ ಇಂದು (ಭಾನುವಾರ) ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
ಬೆಳಗ್ಗೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಿರುವ ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ, ಜಿಲ್ಲೆಯಲ್ಲಿನ ಅಗ್ನಿಶಾಮಕ ವಾಹನಗಳು, ಪಕ್ಕದ ಜಿಲ್ಲೆಗಳಾದ ಪ್ರತಾಪಗಢ ಮತ್ತು ಕೌಶಂಬಿಯಿಂದಲೂ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಜೊತೆಗೆ ಸೇನೆ ಹಾಗೂ ವಾಯುಪಡೆಯ ಅಗ್ನಿಶಾಮಕ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಟ್ಟಡದ ಐದನೇ ಮಹಡಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಮೇಲಿನ ಮಹಡಿಗಳಿಗೂ ವ್ಯಾಪಿಸಿದೆ. ಇದೀಗ ಐದು, ಆರು ಮತ್ತು ಏಳನೇ ಮಹಡಿಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 8ನೇ ಮಹಡಿಯಲ್ಲಿ ಬೆಂಕಿ ನಂದಿಸುವ ಪ್ರಯತ್ನಗಳು ನಡೆಯುತ್ತಿದೆ. ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ಈವರೆಗೆ ತಿಳಿದುಬಂದಿಲ್ಲ ಎಂದೂ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ ಪೈಕಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ತಿಳಿಸಿದ್ದಾರೆ.