ಮುಳ್ಳೇರಿಯ: ಆಧುನಿಕ ಇಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಪೈಪೋಟಿ ನಡುವೆಯೂ ಪತ್ರಿಕಾ ಮಾಧ್ಯಮಕ್ಕೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ ತಿಳಿಸಿದ್ದಾರೆ.
ಅವರು ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಶುಕ್ರವಾರ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ನಡೆದ ಕನ್ನಡ ಪತ್ರಿಕಾ ದಿನಾಚರಣೆ, ಚಿಣ್ಣರ ಕಲರವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಮುಂದಾಳು ಕುಂಟಾರು ರವೀಶ ತಂತ್ರಿ ಪತ್ರಿಕಾದಿನ ಸಂದೇಶ ನೀಡಿದರು. ಈ ಸಂದರ್ಭ ಹಿರಿಯ ಜಾನಪದ ಹಾಡುಗಾರ ಗೋ.ನಾ.ಸ್ವಾಮಿ, ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಸಮಾಜಸೇವಕ ಶ್ರೀಧರ ಶೆಟ್ಟಿ ಮುಟ್ಟಂ, ಪತ್ರಿಕಾ ವಿತರಕ ಪೈಕೆ ಕೃಷ್ಣ ಭಟ್ ಮುಳ್ಳೇರಿಯ ಅವರನ್ನು ಸನ್ಮಾನಿಸಲಾಯಿತು.
ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ವತಿಯಿಂದ ನಡೆಯಲಿರುವ ಚಿಣ್ಣರ ಕಲರವ ತರಬೇತಿ ಕಾರ್ಯಕ್ರಮಕ್ಕೆ ಚೆಂಡೆ ಬಾರಿಸುವ ಮೂಲಕ ಪ್ರಕಾಶ್ ರಾಥೋಡ ಚಾಲನೆ ನೀಡಿದರು. ಸಮಾಜಸೇವಕ ಗೋಪಾಲಶೆಟ್ಟಿ ಅರಿಬೈಲು, ವಾಮನ ರಾವ್ ಬೇಕಲ್, ಗಣೇಶ ವತ್ಸ ನೆಕ್ರಾಜೆ, ವೇಣುಗೋಪಾಲ ನಾಯರ್ ಕೋಡೋತ್, ಜೆಡ್.ಎ ಕಯ್ಯಾರ್, ಪುರುಷೋತ್ತಮ ಪೆರ್ಲ, ರವಿ ನಾಯ್ಕಾಪು, ಪ್ರೊ. ಎ.ಶ್ರೀನಾಥ್ ಉಪಸ್ಥಿತರಿದದರು. ಅಕಾಡಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಎನ್. ಸ್ವಾಗತಿಸಿದರು. ಬಾಳಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಗಣೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಂಗಾಧರ ತೆಕ್ಕೆಮೂಲೆ ವಂದಿಸಿದರು. ಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರಿಂದ ಸ್ವರಚಿತ ಕವನವಾಚನ ನಡೆಯಿತು. ಚಿಣ್ಣರ ಕಲರವ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸಂಧ್ಯಾಗೀತ ಬಾಯಾರು ಮತ್ತು ಅಖಿಲೇಶ್ ನಗುಮುಗಂ ಸಹಕರಿಸುವರು.