ಕೋಲ್ಕತ್ತ: ಶಿಕ್ಷಕರ ನೇಮಕಾತಿ ಹಗರಣದ ಆರೋಪಿ, ಪಶ್ಚಿಮ ಬಂಗಾಳದ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರನ್ನು ಮಮತಾ ಬ್ಯಾನರ್ಜಿ ಸರ್ಕಾರವು ಸಚಿವ ಸ್ಥಾನದಿಂದ ವಜಾಗೊಳಿಸಿದೆ.
ವಜಾಗೊಳಿಸಿದ ಆದೇಶದ ಪ್ರತಿಯನ್ನು ಸುದ್ದಿಸಂಸ್ಥೆ 'ಎಎನ್‌ಐ' ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಅಪಾರ್ಟ್‌ಮೆಂಟ್‌ನಿಂದ ಆಸ್ತಿ ಹಾಗೂ ವಿದೇಶಿ ವಿನಿಮಯದ ದಾಖಲೆ ಸಹಿತ ಸರಿ ಸುಮಾರು ₹50 ಕೋಟಿ ನಗದು ಮತ್ತು ಕೆ.ಜಿಗಟ್ಟಲೆ ಚಿನ್ನವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಾರ್ಥ ಚಟರ್ಜಿ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಸಿಪಿಐ(ಎಂ) ಆರೋಪಿಸಿದ್ದವು.