ನವದೆಹಲಿ: ಮೊನ್ನೆಯಷ್ಟೇ ಕೆಲವು ಪದಗಳನ್ನು ಅಸಂಸದ್ದೀಯ ಪದಗಳ ಪಟ್ಟಿಗೆ ಸೇರಿಸಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಂದು ಆದೇಶ ಹೊರಡಿಸುವ ಮೂಲಕ ಮತ್ತೊಮ್ಮೆ ಪ್ರತಿಪಕ್ಷಗಳ ಟೀಕೆಗೆ ಆಹ್ವಾನ ನೀಡಿದೆ.
ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಸಂಸತ್ತಿನ ಒಳಗೆ ಪ್ರತಿಭಟನೆ ಅಥವಾ ಧರಣಿಗೆ ಅವಕಾಶ ಇಲ್ಲ ಎಂದು ಹೇಳಿದೆ.
ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋಡಿ ಅವರು ಆದೇಶ ಹೊರಡಿಸಿದ್ದಾರೆ. ಆ ಪ್ರಕಾರ ಸಂಸತ್ತಿನ ಸದಸ್ಯರು ಸಂಸತ್ತಿನ ಆವರಣವನ್ನು ಯಾವುದೇ ಧರಣಿ, ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಅಥವಾ ಯಾವುದೇ ಧಾರ್ಮಿಕ ಸಮಾರಂಭಕ್ಕೆ ಬಳಸುವಂತಿಲ್ಲ. ದಯವಿಟ್ಟು ಸಹಕರಿಸಿ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಆದೇಶ ಹೊರ ಬೀಳುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಪಿ.ಸಿ. ಮೋಡಿ ಅವರು ಸಹಿಯುಳ್ಳ ಆದೇಶದ ಪ್ರತಿಯನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಜೈರಾಮ್ ರಮೇಶ್, ವಿಶ್ವಗುರು ಇತ್ತೀಚಿನ ಆದೇಶವಿದು… ಭಯವನ್ನೂ ಅನುಮತಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮೊನ್ನೆಯಷ್ಟೇ ಸಂಸತ್ತಿನಲ್ಲಿ ಬಳಸಲೇಬಾರದಾದ ಕೆಲವು ಶಬ್ದಗಳನ್ನು ಪಟ್ಟಿ ಮಾಡಿ ಸರ್ಕಾರ ಹೊಸ ಕೈಪಿಡಿ ಬಿಡುಗಡೆ ಮಾಡಿದೆ. ಇನ್ನು ಮುಂದೆ ಈ ಶಬ್ದಗಳನ್ನು ನಾಯಕರು ಸಂಸತ್ತಿನಲ್ಲಿ ಬಳಸುವಂತಿಲ್ಲ. ಇವುಗಳನ್ನು ಅಸಂಸದೀಯ ಪದಗಳು ಎಂದು ಕರೆಯಲಾಗುತ್ತದೆ. ನೂರಕ್ಕೂ ಅಧಿಕ ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಪೈಕಿ ಹಲವು ದಿನನಿತ್ಯ ಬಳಸುವ ಪದಗಳಾಗಿವೆ. ಆದ್ದರಿಂದ ರಾಜಕಾರಣಿಗಳು ಈ ಮಾತುಗಳನ್ನಾಡಿದರೆ ಅವು ಅಸಂಸದೀಯ ಅಂದರೆ ಕೆಟ್ಟ ಪದಗಳು ಎನಿಸಿಕೊಳ್ಳಲಿವೆ. ಆದ್ದರಿಂದ ಇನ್ನುಮುಂದೆ ರಾಜಕಾರಣಗಳಿಗೆ ಮಾತನಾಡುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.
ನಾಚಿಕೆಗೇಡು, ಬೂಟಾಟಿಕೆ, ಭ್ರಷ್ಟ, ಅಸಮರ್ಥ, ದ್ರೋಹ ಬಗೆದ, ಬಾಲಬುದ್ಧಿ, ನಾಟಕ, ಕಿವುಡ ಸರ್ಕಾರ, ತಮಟೆ ಬಾರಿಸುವುದು, ಕೋವಿಡ್ ಸ್ಪ್ರೆಡರ್, ಅರಾಜಕತಾವಾದಿ, ವಿನಾಶ್ ಪುರುಷ್, ಲೈಂಗಿಕ ಕಿರುಕುಳ, ರಕ್ತಪಾತ, ಕ್ರೂರಿ, ದ್ರೋಹ ಬಗೆದ, ನಾಚಿಕೆಗೇಡು, ನಿಂದಿಸಿದ, ಮೋಸಮಾಡಿದ, ಚಮಚಾಗಿರಿ, ಚೇಲಾಗಳು, ಬಾಲಿಶ, ಹೇಡಿ, ಅಪರಾಧಿ, ಮೊಸಳೆ ಕಣ್ಣೀರು, ಅವಮಾನ, ಕತ್ತೆ, ಕಣ್ಣೊರೆಸು ಹೀಗೆ ನೂರಾರು ಪದಗಳನ್ನು ಈ ಕೈಪಿಡಿ ಒಳಗೊಂಡಿದೆ. ಶಕುನಿ, ವಿನಾಶ ಪುರುಷ್, ಅರಾಜಕತಾವಾದಿ, ಸರ್ವಾಧಿಕಾರಿ, ಖಲಿಸ್ತಾನಿ, ರಕ್ತದಿಂದ ಕೃಷಿ, ಡಬಲ್ ರೋಲ್, ಕೆಲಸಕ್ಕೆ ಬಾರದವ ಹೀಗೆ ಅನೇಕ ಶಬ್ದಗಳೂ ಅಸಂಸದೀಯ ಶಬ್ದಗಳ ಪಟ್ಟಿಯಲ್ಲಿ ಸೇರಿವೆ.
ಕೈಪಿಡಿ ಹೊರಬರುತ್ತಿದ್ದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನಿಂದ ಅಮಾನತಾದರೂ ಸರಿ ನಾವು ಆ ಪದಗಳನ್ನು ಬಳಸುತ್ತೇವೆ ಎಂದು ಕೆಲವು ಸದಸ್ಯರು ಸವಾಲು ಹಾಕಿದ್ದಾರೆ.