ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿರುವುದಾಗಿ ಆಪಾದಿಸಿ ಕೆಲ ದಿನಗಳಿಂದ ಕಾಂಗ್ರೆಸ್ನ ಹಲವು ನಾಯಕರು ಭಾರಿ ಗಲಾಟೆ ಎಬ್ಬಿಸುತ್ತಿದ್ದರು. ಸ್ಮೃತಿ ಅವರ ಮಗಳು, 18 ವರ್ಷದ ಜೊಯಿಶ್ ಇರಾನಿ ಅವರು ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಇವರದ್ದಾಗಿತ್ತು.
ಸ್ಮೃತಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಇವರ ವಿರುದ್ಧ ಸ್ಮೃತಿ ಇರಾನಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರಿಂದ ಕಾಂಗ್ರೆಸ್ ನಾಯಕರು ಭಾರಿ ಮುಖಭಂಗ ಅನುಭವಿಸುವಂತಾಗಿದೆ. ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಇದರ ನಡುವೆಯೇ ಕಾಂಗ್ರೆಸ್ ನಾಯಕರು ಮತ್ತೊಂದು ಗಲಾಟೆ ಶುರು ಮಾಡಿದ್ದಾರೆ. ಅದೇನೆಂದರೆ ಸ್ಮೃತಿ ಇರಾನಿಯವರ ಇದೇ ಪುತ್ರಿ ಜೊಯಿಶ್ ಇರಾನಿ ಅವರ ಮಗಳು ಮದುವೆಯಾಗುತ್ತಿದ್ದು, ಅದರ ನಿಶ್ಚಿತಾರ್ಥ ಫೋಟೋ ಹಂಚಿಕೊಂಡಿದ್ದಾರೆ. ಇನ್ನೂ 18 ತುಂಬದ ಜೊಯಿಶ್ ಇರಾನಿಯದ್ದು ಇದು ಬಾಲ್ಯವಿವಾಹವಾಗಿರುವುದಾಗಿ ಆರೋಪಿಸಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ವಿರೋಧಿಗಳು ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಈ ಫೋಟೋ ಅನ್ನು ಸ್ಮೃತಿ ಇರಾನಿಯವರು 2021ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ತಮ್ಮ ಮಗಳ ನಿಶ್ಚಿತಾರ್ಥ ನಡೆಯುತ್ತಿರುವುದಾಗಿ ಅವರು ಹೇಳಿದ್ದರು. ಆ ಸಂದರ್ಭದಲ್ಲಿ ಮಗಳು ಜೊಯಿಶ್ಗೆ ಇನ್ನೂ 18 ತುಂಬಿರಲಿಲ್ಲ. 18 ವರ್ಷ ತುಂಬುವುದರೊಳಗೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಆದರೆ ಫ್ಯಾಕ್ಟ್ಚೆಕ್ನಲ್ಲಿ ಅಸಲಿಯತ್ತು ಹೊರಬಂದಿದೆ. ಅದೇನೆಂದರೆ, ಸ್ಮೃತಿ ಇರಾನಿಯವರು ಶೇರ್ ಮಾಡಿರುವ ಈ ಫೋಟೋ ಅಸಲಿಗೆ ಅವರ ಮಗಳು ಜೊಯಿಶ್ ಇರಾನಿಯದ್ದು ಅಲ್ಲ. ಆದರೆ, ಅದು ಅವರ ಮಲಮಗಳು ಶಾನೆಲ್ಲೆ ಇರಾನಿಯದ್ದು. ಅಂದರೆ ಸ್ಮೃತಿ ಇರಾನಿ ಅವರ ಪತಿ ಜುಬಿನ್ ಇರಾನಿ ಮತ್ತು ಅವರ ಮೊದಲ ಪತ್ನಿ ಮೋನಾ ಇರಾನಿ ಅವರ ಮಗಳು ಈಕೆ.
ಆದ್ದರಿಂದ ಇಲ್ಲಿಯೂ ಕಾಂಗ್ರೆಸ್ ನಾಯಕರು ಪುನಃ ಮುಖಭಂಗ ಅನುಭವಿಸುವಂತಾಗಿದೆ.