ಕಾಸರಗೋಡು : ಕೇಂದ್ರ ಸರ್ಕಾರದ 'ಒಂದು ಜಿಲ್ಲೆ-ಒಂದು ಉತ್ಪನ್ನ'ಯೋಜನೆಯನ್ವಯ ಕಾಸರಗೋಡಿನ ಹಲಸಿನ ಹಣ್ಣನ್ನು ಜಿಲ್ಲಾ ಉತ್ಪನ್ನವೆಂದು ಅಂಗೀಕರಿಸಲಾಗಿದೆ. ಈ ಹಿಂದೆ ಕಾಸರಗೋಡಿಗೆ ಕಲ್ಲುಮ್ಮಕಾಯಿ ಎಂಬ ಉತ್ಪನ್ನವನ್ನು ಶಿಫಾರಸುಮಾಡಲಾಗಿತ್ತು. ಆದರೆ ಜಿಲ್ಲೆಯ ಅತ್ಯಂತ ಕಡಿಮೆ ಪ್ರದೇಶದಲ್ಲಿ ಮಾತ್ರ ಕಂಡುಬರುವ ಕಲ್ಲುಮ್ಮಕಾಯಕ್ಕಿಂತ ಜಿಲ್ಲೆಯ ಎಲ್ಲೆಡೆ ಲಭ್ಯವಿದ್ದು, ಔಷಧೀಯ ಗುಣ ಮತ್ತು ಆದಾಯದ ಸಾಮಥ್ರ್ಯ ಹೊಂದಿರುವ ಹಲಸನ್ನು ಪರಿಗಣಿಸಲಾಗಿದೆ. ಹಲಸು ಸುಲಭವಾಗಿ ಲಭ್ಯವಾಗುವುದರಿಂದ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಸಲ್ಲಿಸಿದ ಅರ್ಜಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಯೋಜನೆಯು ಪ್ರತಿ ಜಿಲ್ಲೆಯಲ್ಲಿ ಒಂದೊಂದು ಉತ್ಪನ್ನವನ್ನು ಪತ್ತೆಹಚ್ಚಿ ಅವುಗಳನ್ನು ಮತ್ತಷ್ಟು ವಿಸ್ತರಿಸುವುದು ಮತ್ತು ಅದರಿಂದ ಹೆಚ್ಚಿನ ಉದ್ಯಮಗಳನ್ನು ಪ್ರಾರಂಭಿಸುವುದೂ ಯೋಜನೆಯ ಉದ್ದೇಶವಾಗಿದೆ. ಕೃಷಿ ಇಲಾಖೆಯ ವಿವಿಧ ಯೋಜನೆಗಳಲ್ಲಿ ಸೇರಿಸುವ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಹಲಸು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ.
ಸಂಸ್ಕರಣೆಯ ಮೂಲಕ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿದ್ದು, ಹಲಸಿನ ಹಣ್ಣಿನ ಉತ್ಪನ್ನವನ್ನು ಈ ವಲಯದಲ್ಲಿ ಸೇರ್ಪಡೆಗೊಳಿಸಲಾಗಿದೆ. ಹಸಿ ಹಲಸಿನ ಹಣ್ಣಿನಿಂದ ತೊಡಗಿ ಹಲಸಿನ ಹಣ್ಣಿನ ವರೆಗೆ ಹಲಸಿನ ಪುಡಿ, ಹಲಸಿನ ಐಸ್ ಕ್ರೀಂ, ಹಲಸಿನ ಚಿಪ್ಸ್, ಹಲಸಿನ ಹಣ್ಣಿನ ಜಾಮ್, ವಿವಿಧ ಔಷಧಗಳಂತಹ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ಇದರಿಂದ ತಯಾರಿಸುವ ಯೋಜನೆಯಿರಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಧಾರಾಳವಾಗಿ ಲಭ್ಯವಾಗುತ್ತಿರುವ ಹಲಸಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಹಾಗೂ ಔಷಧೀಯ ಗುಣದ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಲಸು ಹಾಳಾಗುತ್ತಿದೆ. ಹಲಸಿನಿಂದ ಕೈಗಾರಿಕಾ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ತಿಳಿಸಿದ್ದಾರೆ.