ಕಾಸರಗೋಡು: ಆರೋಗ್ಯದ ಜತೆಗೆ ರುಚಿಯಾದ ಆಹಾರ ಉಣಬಡಿಸುವ ಮೂಲಕ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ಮೇಳ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸೋಮವಾರ ಆರಂಭಗೊಂಡಿತು. ಹತ್ತು ದಿವಸಗಳ ಕಾಲ ಕರ್ಕಾಟಕ ಮಾಸ ಔಷಧೀಯ ಗಂಜಿ ವಿತರಣೆಯಾಗಲಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಗಂಜಿ ಮೇಳ ಉದ್ಘಾಟಿಸಿ ಮಾತನಾಡಿ, ಕರ್ಕಾಟಕ ಮಾಸದ ಗಂಜಿಯನ್ನು 10 ದಿವಸಗಳ ಕಾಲ ನಿರಂತರವಾಗಿ ಸೇವಿಸುವುದರಿಂದ ಆರೋಗ್ಯ ರಕ್ಷಣೆ ಸಾಧ್ಯ. ವ್ಯಾಯಾಮವಿಲ್ಲದ ಹಾಗೂ ಕೆಲಸದ ಜಂಜಾಟದ ನಡುವೆ ಇಂತಹ ಔಷಧೀಯ ಗುಣವುಳ್ಳ ಗಂಜಿ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮುಖ್ಯ ಅತಿಥಿಯಾಗಿದ್ದರು. ಆಗಸ್ಟ್ 5 ರವರೆಗೆ ಕಾಸರಗೋಡು ಕಲೆಕ್ಟರೇಟ್ ಆವರಣದಲ್ಲಿ ಮೇಳ ಆಯೋಜಿಸಲಾಗಿದೆ.
ಆಯುರ್ವೇದ ನಿಯಮಗಳ ಪ್ರಕಾರ, ಔಷಧ ಗಂಜಿ, ಮೆಂತ್ಯ ಗಂಜಿ, ಜೀರಿಗೆ ಗಂಜಿ, ತುಪ್ಪದ ಗಂಜಿ ಜತೆಗೆ ಹತ್ತು ವಿಧದ ಪದಾರ್ಥ, ನೆಲ್ಲಿಕಾಯಿ ಚಟ್ನಿ ಒಳಗೊಂಡಿದೆ. ಉತ್ಸವದಲ್ಲಿ ಕಾಸರಗೋಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಕುಟುಂಬಶ್ರೀ ಕಾರ್ಯಕರ್ತರು ತಯಾರಿಸಿದ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವೂ ಇರಲಿದೆ. ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ಸಹಾಯಕ ಜಿಲ್ಲಾ ಮಿಷನ್ ಸಂಯೋಜಕರಾದ ಡಿ ಹರಿದಾಸ್, ಪ್ರಕಾಶನ್ ಪಾಳಾಯಿ, ಸಿ.ಎಚ್ ಇಕ್ಬಾಲ್ ಮತ್ತು ಜಿಲ್ಲಾ ಕಾರ್ಯಕ್ರಮ-ಮಾರುಕಟ್ಟೆ ವ್ಯವಸ್ಥಾಪಕ ತತಿಲೇಶ್ ತ್ಯಾಂಪನ್ ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ಮೇಳ
0
ಜುಲೈ 27, 2022