ಮುಂಬೈ: ಮಂಕಿಪಾಕ್ಸ್ ವೈರಸ್ ಸೋಂಕು ಪತ್ತೆಗಾಗಿ ಜೀನ್ಸ್2ಮಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಆರ್‌ಟಿ- ಪಿಸಿಆರ್ ಆಧರಿತ ಕಿಟ್ ಬಿಡುಗಡೆ ಮಾಡಿದೆ.
ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಸ್‌ನ ಸೋಂಕು ಇರುವುದನ್ನು ಈ ಕಿಟ್ ಬಳಸಿ ನಡೆಸುವ ಪರೀಕ್ಷೆಯಿಂದ 50 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ತಿಳಿಯಬಹುದಾಗಿದೆ ಎಂದು ಕಂಪನಿ ಮೂಲಗಳು ಹೇಳಿವೆ.
'ಕಂಪನಿ ತಯಾರಿಸುವ ಕಿಟ್‌ಗಳು ಗರಿಷ್ಠ ಮಟ್ಟದ ನಿಖರತೆಯ ಫಲಿತಾಂಶ ನೀಡುತ್ತವೆ. ಅಲ್ಪಸಮಯದಲ್ಲಿಯೇ ಸೋಂಕು ಪತ್ತೆ ಹಚ್ಚುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಆರ್‌ಟಿ-ಪಿಸಿಆರ್ ಆಧರಿತ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಲಾಗಿದೆ' ಎಂದು ಜೀನ್ಸ್2ಮಿ ಕಂಪನಿಯ ಸಿಇಒ ಹಾಗೂ ಸಂಸ್ಥಾಪಕ ನೀರಜ್ ಗುಪ್ತಾ ಹೇಳಿದ್ದಾರೆ.
ಮಾನವ ದೇಹದಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ ಬಳಸುವ ಸಾಧನಗಳ (ಐವಿಡಿ) ತಯಾರಿಕೆಯಲ್ಲಿ ಜೀನ್ಸ್2ಮಿ ಪ್ರೈವೇಟ್ ಲಿಮಿಟೆಡ್ ಮುಂಚೂಣಿಯಲ್ಲಿದೆ. ಕಂಪನಿಯು ಎರಡು ವಿಧದ ಕಿಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಬಳಸಬಹುದಾದ ಪಿಸಿಆರ್ ಆಧಾರಿತ ಕಿಟ್ ಹಾಗೂ ಆಸ್ಪತ್ರೆಗಳು, ವಿಮಾನನಿಲ್ದಾಣಗಳು, ಡಯಾಗ್ನೊಸ್ಟಿಕ್ ಕೇಂದ್ರಗಳು, ಪ್ರಯೋಗಾಲಯಗಳು ಹಾಗೂ ಆರೋಗ್ಯ ಶಿಬಿರಗಳಲ್ಲಿ ಬಳಸಬಹುದಾದ ಕಿಟ್‌ಗಳನ್ನು ಬಿಡುಗಡೆ ಮಾಡಿದೆ.