ನವದೆಹಲಿ: ಕೇಂದ್ರ ಸಚಿವರಾದ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಮಚಂದ್ರ ಪ್ರಸಾದ್ ಸಿಂಗ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನಖ್ವಿ ಮತ್ತು ಉಕ್ಕು ಸಚಿವ ಸಿಂಗ್ ಅವರು ತಮ್ಮ ರಾಜ್ಯಸಭೆಯ ಅವಧಿ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ರಾಜೀನಾಮೆ ಸಲ್ಲಿಸಿದರು.
ರಾಷ್ಟ್ರಪತಿ ಭವನದ ಹೇಳಿಕೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ, ಕ್ಯಾಬಿನೆಟ್ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರಿಗೆ ಈಗಿರುವ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ವಹಿಸಿಕೊಳ್ಳಲು ರಾಷ್ಟ್ರಪತಿಗಳು ಸೂಚಿಸಿದ್ದಾರೆ.
ಕ್ಯಾಬಿನೆಟ್ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈಗಿರುವ ಖಾತೆಗೆ ಹೆಚ್ಚುವರಿಯಾಗಿ ಉಕ್ಕು ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ.