ಕಾಸರಗೋಡು: ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು (ಮಂಗಳವಾರ, ಜುಲೈ 5) ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಕಾಲೇಜುಗಳಿಗೆ ರಜೆ ಅನ್ವಯಿಸುವುದಿಲ್ಲ.
ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಹಾಗೂ ಇತರ ಜಲಮೂಲಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿ, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಎಲ್ಲ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿಗಳ ಫೇಸ್ ಬುಕ್ ಪೋಸ್ಟ್:
ಕಾಸರಗೋಡು ಸೇರಿದಂತೆ ಆರು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇನ್ನೂ ಜಾರಿಯಲ್ಲಿದೆ. ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಭಾರೀ ಮಳೆ ಎಂದರೆ 24 ಗಂಟೆಗಳಲ್ಲಿ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗಲಿದೆ.
ನಿನ್ನೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.ಚಂದ್ರಗಿರಿ, ಸೀರೆ, ತೇಜಸ್ವಿನಿ ಮತ್ತು ಚೈತ್ರವಾಹಿನಿ ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆ ಮೇಲೆ ನೀರು ನುಗ್ಗಿದ್ದರಿಂದ ವಿವಿಧೆಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿ ಕ್ವಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.