ಬದಿಯಡ್ಕ: ಎಡನೀರು ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಆಯೋಜನೆಗೊಂಡಿರುವ ಯಕ್ಷಗಾನ ತಾಳಮದ್ದಳೆ ಸಪ್ರಾಹ “ಶ್ರೀಕೃಷ್ಣ ಚರಿತಮ್” ಕಾರ್ಯಕ್ರಮಕ್ಕೆ ಕಾಸರಗೋಡು ಚಿನ್ಮಯ ವಿದ್ಯಾಲಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.
ಎಡನೀರು ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ರಾ.ಸ್ವ.ಸೇ.ಸಂ.ದ ಅಖಿಲ ಭಾರತ ಆಹಾನಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಕರ್ನಾಟಕ ಲೋಕೇವಾ ಆಯೋಗದ ನಿವೃತ್ತ ಅಧ್ಯಕ್ಷ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ.ಟಿ.ಶಾಮ ಭಟ್ ಉಪಸ್ಥಿತರಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಪ್ರಾರ್ಥಿಸಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ವಂದಿಸಿದರು. ವಾಸುದೇವರಂಗ ಭಟ್ ನಿರೂಪಿಸಿದರು.
ಬಳಿಕ ರುಕ್ಮಿಣೀ ಸ್ವಯಂವರ ಪ್ರಸಂಗದ ತಾಳಮದ್ದಳೆ ನೆಡಯಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಅಮೃತಾ ಅಡಿಗ, ಲವಕುಮಾರ ಐಲ, ಕೌಶಿಕ್ ರಾವ್ ಪುತ್ತಿಗೆ ಹಿಮ್ಮೇಳದಲ್ಲಿ ಹಾಗೂ ರಾಧಾಕೃಷ್ಣ ಕಲ್ಚಾರ್, ರಾಜೇಂದ್ರ ಕಲ್ಲೂರಾಯ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ವಾದಿರಾಜ ಕಲ್ಲೂರಾಯ, ಸೀತಾರಾಮಕುಮಾರ್ ಕಟೀಲು ಮುಮ್ಮೇಳ ಪಾತ್ರಗಳನ್ನು ನಿರ್ವಹಿಸಿದರು. ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಪ್ರಾಯೋಜಕತವದಲ್ಲಿ ತಾಳಮದ್ದಳೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ.