ಮಂಜೇಶ್ವರ: ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೆರೆ ಪೀಡಿತ ಪ್ರದೇಶವಾದ ಮಂಜೇಶ್ವರ ಗ್ರಾಮ ಪಂಚಾಯತ್ ನ 13 ನೇ ವಾರ್ಡ್ ವಾಮಂಜೂರು ಕಜೆಯ ಕೊಪ್ಪಳ ಪ್ರದೇಶದಲ್ಲಿ ಕಳೆದ 2/3 ದಿನಗಳಲ್ಲಿ ಪರಿಸರ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಇದೇ ಪರಿಸರದಲ್ಲಿ ಉಪ್ಪಳ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆ ಸಂಗಮಿಸುವ ಪರಿಸರದ ಅನೇಕ ಹಳ್ಳ,ತೊರೆಗಳಿಂದ ನೀರು ಮನೆಗಳಿಗೆ ನುಗ್ಗಿದೆ. ಪರಿಸರದಲ್ಲಿ ಇಪ್ಪತ್ತರಷ್ಟು ಮನೆಗಳಿದ್ದು, ಇದರಿಂದ ಏಳು ಕುಟುಂಬಗಳ ಪೈಕಿ ಹಲವು ಮನೆಗಳಲ್ಲಿ ವಾಸಿಸುವರು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಇಲ್ಲಿನ ದೌಲತ್ ಖಾನ್, ವಿವೇಕ್, ಉದಯ, ಗಂಗಾಧರ, ಜಯಂತ್, ಶೇಖರ, ಭಾಸ್ಕರ, ಎಂಬಿವರ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಗುರುವಾರ ನೆರೆ ನೀರು ತಗ್ಗಿದ ಬಳಿಕ ಸ್ಥಳಾಂತರಗೊಂಡ ಸ್ಥಳೀಯರು ತಮ್ಮ ಮನೆಗಳಿಗೆ ಆಗಮಿಸಿ, ತಮ್ಮ ತಮ್ಮ ಮನೆಗಳಲ್ಲಿ ಶುಚಿಕರಣದಲ್ಲಿ ತೊಡಗಿದ್ದಾರೆ. ಇಲ್ಲಿಯ ನಿವಾಸಿ ದೌಲತ್ ಖಾನ್ ರವರು ಸಮೀಪದ ಬಿಲಾಲ್ ಮಸೀದಿಯ ಬಾಡಿಗೆ ಮನೆಯಲ್ಲಿ ಕಳೆದ 25 ವರ್ಷಗಳಿಂದ ತನ್ನ ಪತ್ನಿ ಮಕ್ಕಳ ಜೊತೆ ವಾಸಿಸುತ್ತಿದ್ದು, ದನ ಸಾಕಿ ಸಿಗುವ ಹಾಲನ್ನು ಮಾರಾಟ ಸಿಗುವ ಅಲ್ಪ ಮೊತ್ತದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರ ಮನೆಗೆ ನೆರೆ ನೀರು ನುಗ್ಗಿದ ಕಾರಣ ವಸ್ತುಗಳೆಲ್ಲಾ ನೀರು ಪಾಲಾಗಿದೆ. ಸಾಕು ದನಗಳನ್ನು ಕರು ಸಮೇತ ಬೇರೆಡೆಗೆ ಕೊಂಡೋಯಲಾಗಿತ್ತು. ಇದೀಗ ಮನೆಯೊಳಗೆ ಹೊಳೆ ನೀರು ತುಂಬಿದ್ದು, ತ್ಯಾಜ್ಯಗಳು ಹಾಗೂ ನೀರಿನಲ್ಲಿ ತೇಲಿ ಬಂದ ಕಸ ಕಡ್ಡಿಗಳನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿದ್ದಾರೆ. ಘಟನೆಯನ್ನರಿತು ಸ್ಥಳಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆಯೂ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಪಜ್ವ ಭೇಟಿ ನೀಡಿ ಮನೆಯವರ ಸ್ಥಿತಿ ಗತಿಗಳನ್ನು ಅವಲೋಕಿಸಿದರು. ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿನ ಜನತೆ ಪಡುತ್ತಿರುವ ಸಂಕಷ್ಟಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಲಭಿಸದೆ ಇದ್ದು, ಕೇಂದ್ರ ಸರ್ಕಾರದ ಮೂಲಕ ಇಲ್ಲಿನ ಜನತೆಗೆ ಮಳೆಗಾಲದಲ್ಲಿ ನೆರೆ ಪರಿಹಾರಕ್ಕೆ ನೆರವು, ಸೂಕ್ತ ವ್ಯವಸ್ತೆಯಾಗುವಂತೆ ಅರ್ಜಿ ಸಲ್ಲಿಸಿ, ಮುಂದಿನ ವರ್ಷಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸುವುದಾಗಿ ಸಂಕಷ್ಟ ಪೀಡಿತರಿಗೆ ಭರವಸೆ ನೀಡಿರುವರು.