ಕಾಸರಗೋಡು: ಕುಟುಂಬಶ್ರೀ ಸಿ.ಡಿ.ಎಸ್ ನೇತೃತ್ವದಲ್ಲಿ ಬೇಡಡ್ಕ ಗ್ರಾಮ ಪಂಚಾಯಿತಿಯಲ್ಲಿ ಹಲಸು ಮಹೋತ್ಸವ ನಡೆಯಿತು. ಬೇಡಡ್ಕ ಸಿಡಿಎಸ್ ಸಭಾಂಗಣದಲ್ಲಿ ನಡೆದ ಉತ್ಸವವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್ ಅಧ್ಯಕ್ಷತೆ ವಹಿಸಿದ್ದರು. ಹಲಸಿನ ನಾನಾ ಖಾದ್ಯಗಳು ಹಲಸುಪ್ರಿಯರರ ಆಕರ್ಷಣೆಗೆ ಕಾರಣವಾಯಿತು. ಪಂಚಾಯಿತಿಯ 17 ವಾರ್ಡ್‍ಗಳ ಸಹಭಾಗಿತ್ವದಲ್ಲಿ ಹಲಸು ಮಹೋತ್ಸವ ಆಯೋಜಿಸಲಾಗಿತ್ತು.
ಹಲಸಿನ ಕೇಕ್, ಲಡ್ಡು, ಪಾಯಸ, ಬಿರಿಯಾನಿ, ಕಿಲಿಕೂಟ್, ಕಟ್ಲೆಟ್ ಸೇರಿದಂತೆ ಸುಮಾರು 212 ಖಾದ್ಯಗಳನ್ನು ತಯಾರಿಸಿದ್ದಾರೆ. ಹಲಸಿನ ಹಣ್ಣನ್ನು ಜನಪ್ರಿಯಗೊಳಿಸುವುದು, ಹಲಸಿನ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡುವುದು ಮತ್ತು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ಹಲಸು ಮಹೋತ್ಸವ ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ ಮಾಧವನ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಲತಾ, ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು. ಸಿಡಿಎಸ್ ಅಧ್ಯಕ್ಷೆ ಎಂ ಗುಲಾಬಿ ಸ್ವಾಗತಿಸಿದರು, ಸಿಡಿಎಸ್ ಉಪಾಧ್ಯಕ್ಷೆ ಬಿ ಸುನಿತಾ ವಂದಿಸಿದರು.