ನವದೆಹಲಿ: ಪ್ರಕರಣಗಳ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕ್ಷಿಪ್ರವಾಗಿ ತೀರ್ಪು ನೀಡಿದ್ದ ಕಾರಣಕ್ಕೆ ಅಮಾನತಾಗಿದ್ದ ಬಿಹಾರದ ಅರಾರಿಯಾ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಜತೆಗೆ ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಅರಾರಿಯಾ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಶಿಕಾಂತ್ ರಾಯ್ ಅವರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಪ್ರಕರಣದ ವಿಚಾರಣೆಯನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಿ, ಶಿಕ್ಷೆ ಪ್ರಕಟಿಸಿದ್ದರು. ಮತ್ತು ಹತ್ಯೆ ಪ್ರಕರಣವೊಂದಲ್ಲಿ ನಾಲ್ಕೇ ದಿನದಲ್ಲಿ ಮರಣದಂಡನೆ ಪ್ರಕಟಿಸಿದ್ದರು. ಶಶಿಕಾಂತ್ ಅವರನ್ನು ಪಟ್ನಾ ಹೈಕೋರ್ಟ್ ಅಮಾನತು ಮಾಡಿತ್ತು. ಈ ಅಮಾನತು ಆದೇಶವನ್ನು ಪ್ರಶ್ನಿಸಿ, ಶಶಿಕಾಂತ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎಸ್.ಆರ್.ಭಟ್ ಅವರಿದ್ದ ಪೀಠವು ಅರ್ಜಿಯನ್ನು ಪರಿಶೀಲಿಸಿತು. 'ಪಟ್ನಾ ಹೈಕೋರ್ಟ್ ನೂತನವಾಗಿ ಜಾರಿಗೆ ತಂದಿರುವ ಬಡ್ತಿ ನೀತಿಯನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಅಮಾನತು ಮಾಡಲಾಗಿದೆ. ನನಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು ಮತ್ತು ಅದರ ಬೆನ್ನಲ್ಲೇ ಅಮಾನತು ಮಾಡಲಾಯಿತು' ಎಂದು ಶಶಿಕಾಂತ್ ಆರೋಪಿಸಿದ್ದರು.
ಈ ಬಗ್ಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಮಾನತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ತ್ವರಿತವಾಗಿ ಪ್ರಕರಣಗಳ ವಿಚಾರಣೆ ಮುಗಿಸಿ, ತೀರ್ಪು ನೀಡಿದ್ದರ ಬಗ್ಗೆ ಪೀಠವು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು. ಒಂದೇ ದಿನದಲ್ಲಿ ವಿಚಾರಣೆ ನಡೆಸಿ, ಅಂದೇ ತೀರ್ಪು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಬಾರಿ ಹೇಳಿದೆ ಎಂದು ಪೀಠವು ಹೇಳಿತು.
'ಪ್ರಕರಣವೊಂದರಲ್ಲಿ ನಾಲ್ಕೇ ದಿನದಲ್ಲಿ ಮರಣದಂಡನೆ ವಿಧಿಸಿದ್ದೀರಿ. ಆ ಶಿಕ್ಷೆಗೆ ಗುರಿಯಾಗಲಿರುವ ವ್ಯಕ್ತಿ ತನ್ನ ಪರವಾಗಿ ವಾದ ಮಂಡಿಸಲು ಅವಕಾಶವನ್ನೇ ನೀಡಿಲ್ಲ. ಇದು ನ್ಯಾಯದ ಅಣಕ. ಈ ಹಿಂದೆ ಮಧ್ಯ ಪ್ರದೇಶದಲ್ಲಿ ಒಂಬತ್ತೇ ದಿನದಲ್ಲಿ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ, ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು' ಎಂದು ಪೀಠವು ಹೇಳಿತು.
'ಸೆಷನ್ಸ್ ನ್ಯಾಯಾಧೀಶರಾದ ಅರ್ಜಿದಾರರ ಗಮನದಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪುಗಳೆಲ್ಲವೂ ಇರಬೇಕಿತ್ತು' ಎಂದು ಪೀಠವು ಹೇಳಿತು.